ನವದೆಹಲಿ : "ಬಲಿಷ್ಠ ಸರಕಾರ" ಈ ಸೂಪರ್ ಭ್ರಷ್ಟ ವ್ಯವಸ್ಥೆಯ ಮೇಲೆ "ಕಠಿಣ ಕ್ರಮ" ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಯಿದೆ ಎಂದು ಭಾರತದ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಎಬಿಜಿ ಶಿಪ್‌ಯಾರ್ಡ್‌ನ ಅಧ್ಯಕ್ಷ ರಿಷಿ ಅಗರ್ವಾಲ್ ಅವರನ್ನು ಶುಕ್ರವಾರ ಪ್ರಶ್ನಿಸಿದ ಬಳಿಕ ವಿಜಯ್ ಮಲ್ಯ ಸಹಿತ ಹಲವು ಕೈಗಾರಿಕೋದ್ಯಮಿಗಳು ಈ ತನಕ ನಡೆಸಿರುವ ಬ್ಯಾಂಕ್ ವಂಚನೆಯ ಮೊತ್ತವನ್ನು ಉಲ್ಲೇಖಿಸಿ ಟ್ವೀಟಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"ವಿಜಯ್ ಮಲ್ಯ: 9,000 ಕೋಟಿ ರೂ., ನೀರವ್ ಮೋದಿ: 14,000 ಕೋಟಿ ರೂ., ರಿಷಿ ಅಗರ್ವಾಲ್: 23,000 ಕೋಟಿ ರೂ. ಇಂದು ದೇಶದಲ್ಲಿ ಸುಮಾರು 14 ಜನರು ಸಾಲದ ಹೊರೆಯಿಂದ ಪ್ರತಿದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇಂತಹ ಧನಪಶುಗಳ ಜೀವನವು ವೈಭವದ ಉತ್ತುಂಗದಲ್ಲಿದೆ. ಈ ಸೂಪರ್ ಭ್ರಷ್ಟ ವ್ಯವಸ್ಥೆಯ ಮೇಲೆ 'ಬಲಿಷ್ಠ ಸರಕಾರವು 'ಬಲವಾದ ಕ್ರಮ' ತೆಗೆದುಕೊಳ್ಳುವ ನಿರೀಕ್ಷೆಯಿದೆ' ಎಂದು ವರುಣ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಈಗ ಬೆಳಕಿಗೆ ಬಂದಿರುವ ಬೃಹತ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಇದು ಕೇಂದ್ರದಲ್ಲಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಅಧಿಕಾರದಲ್ಲಿದ್ದಾಗ ಸಂಭವಿಸಿತ್ತು ಎಂದು ಹೇಳಿದೆ. ಈ ಸಮಯದಲ್ಲಿ ಪಿಲಿಭಿತ್ ಸಂಸದರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಮಾಡಿರುವ ಬ್ಯಾಂಕ್ ಸಾಲದ ವಂಚನೆಗೆ ಸಂಬಂಧಿಸಿ ಇತ್ತೀಚಿನ ಬೆಳವಣಿಗೆಯಲ್ಲಿ ಶಿಪ್ ಯಾರ್ಡ್ ಅಧ್ಯಕ್ಷ ಹಾಗೂ ಮುಖ್ಯ ಪ್ರವರ್ತಕ ರಿಷಿ ಕಮಲೇಶ್ ಅಗರ್‌ವಾಲ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.