HEALTH TIPS

ಕೋವಿಡ್-19 ಪರಿಹಾರ ಪಡೆಯಲು ನಕಲಿ ದಾಖಲೆಗಳ ಬಗ್ಗೆ ಸುಪ್ರೀಂ ಕಳವಳ

               ನವದೆಹಲಿ:ನಕಲಿ ವೈದ್ಯಕೀಯ ಪ್ರಮಾಣಪತ್ರಗಳ ಆಧಾರದಲ್ಲಿ ಕೋವಿಡ್ ಸಾವುಗಳಿಗಾಗಿ 50,000 ರೂ.ಗಳ ಪರಿಹಾರಕ್ಕಾಗಿ ಹಕ್ಕು ಕೋರಿಕೆಯ ದುರ್ಬಳಕೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕಳವಳ ವ್ಯಕ್ತಪಡಿಸಿದೆ.

              ಪರಿಹಾರ ಪಡೆಯಲು ನಕಲಿ ಹಕ್ಕು ಕೋರಿಕೆಗಳನ್ನು ಮಂಡಿಸಲಾಗುತ್ತಿದೆ ಎಂಬ ವರದಿಗಳ ಕುರಿತು ಸಿಎಜಿ ತನಿಖೆಗೆ ತಾನು ಆದೇಶಿಸಬಹುದು ಎಂದು ನ್ಯಾ.ಎಂ.ಆರ್.ಶಾ ನೇತೃತ್ವದ ಪೀಠವು ಸುಳಿವು ನೀಡಿತು.

            'ನಕಲಿ ದಾಖಲೆಗಳನ್ನು ಬಳಸಿಕೊಂಡು ಪರಿಹಾರಕ್ಕಾಗಿ ಅರ್ಜಿಗಳು ಸಲ್ಲಿಕೆಯಾಗಬಹುದು ಎನ್ನುವುದನ್ನು ನಾವೆಂದೂ ಊಹಿಸಿಯೂ ಇರಲಿಲ್ಲ.

             ಕೋವಿಡ್‌ನಿಂದ ಮೃತರ ಕುಟುಂಬಗಳಿಗೆ ಪರಿಹಾರ ನೀಡಿಕೆ ಒಂದು ಪುಣ್ಯಕಾರ್ಯವಾಗಿದೆ. ಈ ಯೋಜನೆಯ ದುರ್ಬಳಕೆಯಾಗಬಹುದು ಎಂದು ನಾವೆಂದೂ ಯೋಚಿಸಿರಲಿಲ್ಲ. ಇದರಲ್ಲಿ           ಅಧಿಕಾರಿಗಳೂ ಭಾಗಿಯಾಗಿದ್ದರೆ ಅದು ಇನ್ನಷ್ಟು ಕೆಟ್ಟದ್ದಾಗುತ್ತದೆ' ಎಂದು ಪೀಠವು ಅಭಿಪ್ರಾಯಿಸಿತು.

'ಕೋವಿಡ್ ಪರಿಹಾರವನ್ನೂ ಪಡೆಯಲು ನಕಲಿ ಹಕ್ಕು ಕೋರಿಕೆಗಳನ್ನು ಮಂಡಿಸುವಷ್ಟರ ಮಟ್ಟಿಗೆ ನಮ್ಮ ನೈತಿಕತೆ ಪತನಗೊಂಡಿದೆಯೇ' ಎಂದು ಪೀಠವು ಅಚ್ಚರಿ ವ್ಯಕ್ತಪಡಿಸಿತು.

              ಕೋವಿಡ್ ಪರಿಹಾರ ಕೋರಿ ಅರ್ಜಿ ಸಲ್ಲಿಕೆಗೆ ಸಮಯ ಮಿತಿಯನ್ನು ಕೋರಿ ಮತ್ತು ನಕಲಿ ಹಕ್ಕು ಕೋರಿಕೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಮಂಗಳವಾರದೊಳಗೆ ಸಲ್ಲಿಸುವುದಾಗಿ ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಸವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ಮಾ.7ರಂದು ಮೆಹ್ತಾ ಅವರು ನಕಲಿ ಕೋವಿಡ್ ಪ್ರಮಾಣಪತ್ರಗಳ ವಿತರಣೆ ಅಥವಾ ನಕಲಿ ಹಕ್ಕು ಕೋರಿಕೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ತಡೆಯಬಹುದು ಎನ್ನುವುದನ್ನು ಪ್ರಸ್ತಾಪಿಸಿದ್ದರು. ಕೋವಿಡ್‌ನಿಂದ ಮೃತರ ಕುಟುಂಬಗಳಿಗೆ 50,000 ಪರಿಹಾರ ನೀಡಿಕೆಯ ಜ.19,2022ರ ಆದೇಶಕ್ಕೆ ಸಂಬಂಧಿಸಿದಂತೆ ಮೃತರು ಒಂದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರೆ ಪ್ರತಿಯೊಂದು ಮಗುವೂ ಪರಿಹಾರವನ್ನು ಪ್ರತ್ಯೇಕವಾಗಿ ಪಡೆಯಲು ಅರ್ಹವಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿ ಅಸ್ಸಾಂ ಸರಕಾರದ ಅರ್ಜಿಯ ಕುರಿತು ಪೀಠವು,ಹಿಂದಿನ ಆದೇಶವು ಅತ್ಯಂತ ಸ್ಪಷ್ಟವಾಗಿದೆ ಮತ್ತು 'ಪ್ರತಿ ಸಾವಿನ 'ಆಧಾರದಲ್ಲಿ ಪರಿಹಾರವನ್ನು ಪಾವತಿಸಬೇಕು ಎಂದು ತಿಳಿಸಿತು.

            ಸರ್ವೋಚ್ಚ ನ್ಯಾಯಾಲಯವು ಆದೇಶಿಸಿರುವ 50,000 ರೂ.ಗಳ ಪರಿಹಾರವನ್ನು ಕೋವಿಡ್‌ನಿಂದ ಸಂಭವಿಸಿರುವ ಪ್ರತಿ ಸಾವಿಗೆ ನೀಡಬೇಕೇ ಹೊರತು ಸಂತ್ರಸ್ತ ಕುಟುಂಬದ ಪ್ರತಿ ಮಗುವಿಗಲ್ಲ ಎಂದು ಪೀಠವು ಸ್ಪಷ್ಟಪಡಿಸಿತು. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ ಒಂದು ಮಗು ಅಥವಾ ಕುಟುಂಬದ ಓರ್ವ ಸದಸ್ಯ ಮಾತ್ರ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಪೋಷಕರಿಬ್ಬರೂ ಕೋವಿಡ್‌ನಿಂದಾಗಿ ಮೃತಪಟ್ಟಿದ್ದರೆ ಆಗ ಪ್ರತಿ ಸಾವಿಗೂ 50,000 ರೂ.ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ಪೀಠವು ಹೇಳಿತು.

            ಸಾಂಕ್ರಾಮಿಕಕ್ಕೆ ಬಲಿಯಾದವರ ಉತ್ತರಾಧಿಕಾರಿಗಳಿಂದ ಅರ್ಜಿ ಸಲ್ಲಿಕೆಗೆ ಗಡುವನ್ನು ನಿಗದಿ ಪಡಿಸುವ ಬಗ್ಗೆ ಮತ್ತು ನಕಲಿ ಹಕ್ಕು ಕೋರಿಕೆಗಳ ಸಲ್ಲಿಕೆಯನ್ನು ತಡೆಯಲು ಮೆಹ್ತಾ ಅವರು,ಕೋವಿಡ್‌ನಿಂದಾಗಿ ಸಾವಿನ ದಿನಾಂಕದಿಂದ ನಾಲ್ಕು ವಾರಗಳಂತಹ ನಿಗದಿತ ಅವಧಿಯನ್ನು ಸೂಚಿಸಬಹುದಾಗಿದೆ ಎಂದು ತಿಳಿಸಿದರು. ಪರಿಹಾರಕ್ಕಾಗಿ ಹಕ್ಕು ಕೋರಿಕೆಗಳನ್ನು ಸಲ್ಲಿಸಲು ಗಡುವು ನಿಗದಿ ಕುರಿತು ಎರಡು ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು.

              ಕೋವಿಡ್‌ನಿಂದ ಮೃತರ ಕುಟುಂಬಗಳಿಗೆ ಪರಿಹಾರವನ್ನು ಕೋರಿ ವಕೀಲ ಗೌರವ ಬನ್ಸಾಲ್ ಮತ್ತು ಇತರ ಕೆಲವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries