ಲಖನೌ: ದ ಕಾಶ್ಮೀರ್ ಫೈಲ್ಸ್ ಸಿನಿಮಾ ನೈಜ ಘಟನೆಗಳ, ವಾಸ್ತವಗಳ ಆಧಾರದಲ್ಲಿ ಮಾಡಲಾಗಿರುವ ಸಿನಿಮಾ ಆಗಿದ್ದು, ಸಿನಿಮಾ ಕುರಿತ ವಿವಾದ ಅನಗತ್ಯವಾಗಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ಕಾಶ್ಮೀರವನ್ನು ಬಳಸಿಕೊಂಡು ಕೆಲವು ಮಂದಿ ಉದ್ಯಮ ನಡೆಸುತ್ತಿದ್ದಾರೆ ಹಾಗೂ ತಮ್ಮ ಭವಿಷ್ಯಕ್ಕೆ ಸಮಸ್ಯೆಯಾಗದಂತೆ ಪ್ರತಿಭಟನೆಯನ್ನು ಸೃಷ್ಟಿಸುತ್ತಿದ್ದಾರೆ.
ಕಾಶ್ಮೀರ ವಿಷಯವನ್ನು ಕೆಲವರು ತಮ್ಮ ಉದ್ಯಮವನ್ನಾಗಿಸಿಕೊಂಡಿದ್ದರು. ಇದಕ್ಕೆ ನಮ್ಮ ಸಿನಿಮಾ ಪೂರ್ಣ ವಿರಾಮ ಹಾಕಿದೆ. ಕಾಶ್ಮೀರ ವಿಷಯವನ್ನು ಬಳಸಿಕೊಂಡು ಲಾಭ ಪಡೆಯುತ್ತಿದ್ದವರು ಈಗ ಸಿನಿಮಾದ ಕುರಿತು ವಿವಾದ ಸೃಷ್ಟಿಸುತ್ತಿದ್ದಾರೆ. ಆದರೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ಯಾವುದೇ ವಿವಾದ ಇರಲು ಸಾಧ್ಯವಿಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಮುದಾಯವೊಂದಕ್ಕೆ ಉಗ್ರಗಾಮಿತ್ವ ಪ್ರವೇಶಿಸಿ, ಅದಕ್ಕೆ ಸಮಾಜದ ಒಂದು ಭಾಗ ಸೈದ್ಧಾಂತಿಕ ಬೆಂಬಲ ನೀಡಿದರೆ ಅದು ದುರಂತಕ್ಕೆ ಕಾರಣವಾಗಲಿದೆ ಎಂಬುದನ್ನು ನಾವು ಸಿನಿಮಾದಲ್ಲಿ ತೋರಿಸಿದ್ದೇವೆ ಎಂದು ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ನಟಿ ಪಲ್ಲವಿ ಜೋಷಿ ಅವರೊಂದಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತನಾಡಿದ ಬಳಿಕ ವಿವೇಕ್ ಅಗ್ನಿಹೋತ್ರಿ, ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೇರುತ್ತಿರುವ ಯೋಗಿ ಆದಿತ್ಯನಾಥ್ ಅವರಿಗೆ ಅಭಿನಂದನೆ ಸಲ್ಲಿಸಿದೆ. ಭೇಟಿ ವೇಳೆ ಸಿಎಂ ಜೊತೆ ಫಿಲ್ಮ್ ಸಿಟಿ ಯೋಜನೆಯ ಬಗ್ಗೆಯೂ ಚರ್ಚಿಸಲಾಗಿದ್ದು, ಫಿಲ್ಮ್ ಸಿಟಿ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.




