HEALTH TIPS

ಸುಲ್ಲಿ ಡೀಲ್ಸ್, ಬುಲ್ಲಿ ಬಾಯಿ ಪ್ರಕರಣ ಸಂಬಂಧ ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ

               ನವದೆಹಲಿ: ಸುಲ್ಲಿ ಡೀಲ್ಸ್ ಮತ್ತು ಬುಲ್ಲಿ ಬಾಯಿ ಆಯಪ್‌ಗೆ ಸಂಬಂಧಿಸಿದಂತೆ ಪೊಲೀಸರು ದೆಹಲಿ ಮತ್ತು ಮುಂಬೈನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಹಾಗೂ ಈವರೆಗೆ 6 ಜನರನ್ನು ಬಂಧಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.

              ಪೊಲೀಸರು ಮಾ. 4ರಂದು ದೆಹಲಿಯ ಸ್ಥಳೀಯ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಬುಲ್ಲಿಬಾಯಿ ಆಯಪ್‌ ಪ್ರಕರಣ ಸಂಬಂಧ 2,000 ಪುಟಗಳು ಮತ್ತು ಸುಲ್ಲಿ ಡೀಲ್ಸ್ ಪ್ರಕರಣ ಸಂಬಂಧ 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎನ್ನಲಾಗಿದೆ.

               'ಸುಲ್ಲಿ ಡೀಲ್ಸ್' ಮೊಬೈಲ್ ಅಪ್ಲಿಕೇಶನ್ 2021ರ ಜುಲೈನಲ್ಲಿ ಕಾಣಿಸಿಕೊಂಡಿತ್ತು. ಇದಾದ ಆರು ತಿಂಗಳ ತರುವಾಯ ಇದೇ ರೀತಿಯ ಮತ್ತೊಂದು ಆಯಪ್ 'ಬುಲ್ಲಿ ಬಾಯಿ' ಪತ್ತೆಯಾಗಿತ್ತು. ಎರಡರಲ್ಲೂ ನೂರಕ್ಕೂ ಅಧಿಕ ಖ್ಯಾತ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಲಾಗಿತ್ತು.

             ಈ ಕುರಿತಾದ ಪ್ರಶ್ನೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಉತ್ತರಿಸಿ, ದೆಹಲಿ ಮತ್ತು ಮುಂಬೈ ಪೊಲೀಸರು ಐಪಿಸಿ ಸೆಕ್ಷನ್ 1860 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಅಡಿಯಲ್ಲಿ ಸುಲ್ಲಿ ಡೀಲ್ಸ್ ಮತ್ತು ಬುಲ್ಲಿ ಡೀಲ್ಸ್ ಆಯಪ್ ಸಂಬಂಧ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಸಿದ ಬಳಿಕ ದೆಹಲಿ ಪೊಲೀಸರು ಸುಲ್ಲಿ ಡೀಲ್ಸ್ ಎಂಬ ಆಯಪ್ ಅನ್ನು ತಯಾರಿಸಿದ್ದ ಆರೋಪಿ ಓಂಕಾರೇಶ್ವರ ಠಾಕೂರ್‌ನನ್ನು ಬಂಧಿಸಿದ್ದಾರೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

             ಬುಲ್ಲಿ ಬಾಯಿ ಪ್ರಕರಣದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯಿ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಕರ್ನಾಟಕ, ಉತ್ತರಾಖಂಡ ಮತ್ತು ಒಡಿಶಾದಲ್ಲಿ ಇತರ ನಾಲ್ವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸದ್ಯ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

                  ದೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಭಾರತ ಸರ್ಕಾರವನ್ನು ಟೀಕಿಸುವ ವಿಶ್ವಸಂಸ್ಥೆಯ ಯಾವುದೇ ಅಧಿಕಾರಿಗಳ ಔಪಚಾರಿಕ ಹೇಳಿಕೆಯು ಸರ್ಕಾರಕ್ಕೆ ಲಭ್ಯವಾಗಿಲ್ಲ ಎಂದು ಮಿಶ್ರಾ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries