ಪಾಲಕ್ಕಾಡ್: ಖ್ಯಾತ ನೃತ್ಯಗಾರ್ತಿ ನೀನಾ ಪ್ರಸಾದ್ ಅವರ ಮೋಹಿನಿಯಾಟ್ಟಂ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಘಟನೆಯಲ್ಲಿ ಪಾಲಕ್ಕಾಡ್ ಜಿಲ್ಲಾ ನ್ಯಾಯಾಧೀಶ ಕಲಾಂ ಪಾಷಾ ವಿರುದ್ಧ ಯುವಮೋರ್ಚಾ ತೀವ್ರ ಪ್ರತಿಭಟನೆ ನಡೆಸಿದೆ. ಪಾಲಕ್ಕಾಡ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನ್ಯಾಯಾಧೀಶರ ನಿವಾಸದ ಮುಂದೆ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಲಾಯಿತು. ಮೊನ್ನೆ ನೀನಾ ಪ್ರಸಾದ್ ಅವರ ಮೋಹಿನಿಯಾಟ್ಟಂ ನ್ನು ಕಲಾಂ ಪಾಶಾ ಪೋಲೀಸ್ ಬಲದ ಮೂಲಕ ತಡೆದಿದ್ದರು.
ಪಾಲಕ್ಕಾಡ್ ಮೊಯಿನ್ಸ್ ಶಾಲೆಯಿಂದ ಯುವ ಮೋರ್ಚಾ ಪ್ರತಿಭಟನೆ ಆರಂಭಿಸಿತು. ನೃತ್ಯ ಪ್ರದರ್ಶನ ತಡೆಹಿಡಿದ ನ್ಯಾಯಾಧೀಶರ ನಿವಾಸದ ಮುಂದೆ ನೃತ್ಯ ಪ್ರದರ್ಶನವನ್ನೊಳಗೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೋಲೀಸರು ತಡೆದರು. ಪ್ರತಿಭಟನೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೃಷ್ಣಕುಮಾರ್ ಉದ್ಘಾಟಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಶಿವನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಂ.ಹರಿದಾಸ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೇಣುಗೋಪಾಲ್, ಬಿಜೆಪಿ ಪಾಲಕ್ಕಾಡ್ ಕ್ಷೇತ್ರದ ಅಧ್ಯಕ್ಷ ಬಾಬು ವೆನ್ನಕ್ಕರ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಎಂ.ಸುನೀಲ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನವೀನ್ ವಡಕಂಠರ, ಎಸ್.ಐಶ್ವರ್ಯ, ಜಿಲ್ಲಾ ಮಹಿಳಾ ಸಂಯೋಜಕಿ ಕೆ.ವಿ.ಪ್ರಿಯಾ ಯುವ ಮೋರ್ಚಾ ಪಾಲಕ್ಕಾಡ್ ಕ್ಷೇತ್ರದ ಪದಾಧಿಕಾರಿಗಳಾದ ಎಚ್. ಆರ್.ಜಿ.ಮಿಲನ್, ವಿಷ್ಣುಗುಪ್ತ, ರಘು ಮನಾಲಿ ಮತ್ತು ಸಜಿತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮೊಯಿನ್ಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕಲಾಂ ಪಾಷಾ ಅವರು ನೃತ್ಯ ಪ್ರದರ್ಶನದ ಧ್ವನಿಯಿಂದ ತೊಂದರೆಗಳಾಗುತ್ತಿದೆ ಎಂದು ಪೋಲೀಸರನ್ನು ಬಳಸಿ ತಡೆದಿದ್ದರು. ನ್ಯಾಯಾಧೀಶರ ನಿವಾಸ ಶಾಲೆಯ ಹಿಂಭಾಗದಲ್ಲಿದೆ.


