ಬದಿಯಡ್ಕ ; ಭಗವಂತನ ಮಹಿಮೆ ಅಪಾರವಾದುದು. ಭಕ್ತಿಯಿಂದ ಮಾಡುವ ಆರಾಧನೆ ನಮ್ಮನ್ನು ಉದ್ಧರಿಸುತ್ತದೆ. ಆರಾಧನಾಲಯಗಳ ಪುನರುದ್ಧಾರ, ಜೀರ್ಣೋದ್ಧಾರದಿಂದ ನಾಡು ಸಂಪನ್ನವಾಗುತ್ತದೆ. ಭಕ್ತಿ, ಶ್ರದ್ಧೆ, ಸೇವಾ ಭಾವನೆಯಿಂದ, ಸಮರ್ಪಣಾ ಮನೋಭಾವದಿಂದ ದೇವರ ಸೇವೆಗೆ ಜನರು ಮುಂದಾದಾಗ ದೇವಸ್ಥಾನಗಳ ಅಭಿವೃದ್ಧಿ ಸಾಧ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಅವರು ಮುನಿಯೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಭೆಯನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಜನರ ಮನದಲ್ಲಿ ವಿಲೀನವಾಗಿರುವ ಭಾವನೆಗಳು ಜೀವನದ ಸುಭದ್ರತೆಗೆ, ನೆಮ್ಮದಿಯ ನಾಳೆಗೆ ಕಾರಣವಾಗುವಂತೆ ಮಾಡುವ ಪ್ರಜ್ಞೆ ನಮ್ಮಲ್ಲಿರಬೇಕು. ದೇವರ ಕಾರ್ಯವೂ ಪ್ರತಿಯೊಬ್ಬನ ಬದುಕಿನ ಭಾಗವಾಗಬೇಕು ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು. ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ಭಟ್ ಅಜ್ಜಿಮೂಲೆ ಅಧ್ಯಕ್ಷತೆ ವಹಿಸಿದ್ದರು.
ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಧಾರ್ಮಿಕ ಮುಖಂಡ ಶಂಕರನಾರಾಯಣ ಮಯ್ಯ , ವಾಸ್ತು ಶಿಲ್ಪಿ ಪಿ.ಜಿ.ಜಗನ್ನಿವಾಸ್ ರಾವ್ ಪುತ್ತೂರು, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಕುಂಜತ್ತಾಯ, ನಿವೃತ್ತ ಪ್ರಾಂಶುಪಾಲ ಪುಂಡೂರು ಪುರುಷೋತ್ತಮ ಪುಣಿಚಿತ್ತಾಯ, ಪ್ರಜ್ವಲ್ ಕುದ್ದಣ್ಣಾಯ ಸುಂಟಿಕೊಪ್ಪ
ಮುಖ್ಯ ಅತಿಥಿಗಳಾಗಿದ್ದರು. ದೇವಸ್ಥಾನದ ಮುಕ್ತೇಸರ ಶಂಕರನಾರಾಯಣ ನಡುವಂತಿಲ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿಯ ಕಾರ್ಯದರ್ಶಿ ಅರವಿಂದ ಕುಮಾರ್ ಅಲೆವೂರಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಎಪ್ರಿಲ್ 3 ರಂದು ದೇವಸ್ಥಾನದಲ್ಲಿ ವಿಶೇಷ ಸಭೆಯು ನಡೆಯಲಿದ್ದು ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೀರ್ಣೋದ್ಧಾರ ಸಮಿತಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




.jpg)
