ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರ ವಿರುದ್ಧ ಸುಮಾರು 5,000 ಪುಟಗಳ ಚಾರ್ಜ್ ಶೀಟ್ ಅನ್ನು ಇಂದು ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಸಲ್ಲಿಸಲಾಗಿದೆ ಎಂದು ಇಡಿ ವಕೀಲರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಪ್ರಕರಣಗಳ ವಿಶೇಷ ನ್ಯಾಯಾಲಯವು ದಾಖಲೆಗಳ ಪರಿಶೀಲನೆಯ ನಂತರ ಈ ಚಾರ್ಜ್‌ಶೀಟ್ ಅನ್ನು ಪರಿಶೀಲನೆಗೆ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
20 ವರ್ಷಗಳ ಹಿಂದೆ ಮುಂಬೈನ ಕುರ್ಲಾದಲ್ಲಿ ಮೂರು ಎಕರೆ ಜಾಗಕ್ಕಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪರ್ಕರ್ ಗೆ ನವಾಬ್ ಮಲಿಕ್ ಅವರು 55 ಲಕ್ಷ ರೂ. ನಗದು ನೀಡಿದ್ದರು ಎಂದು ಇಡಿ ಕಳೆದ ವಿಚಾರಣೆಯಲ್ಲಿ ತನ್ನ ರಿಮಾಂಡ್ ಪ್ರತಿಯಲ್ಲಿ ತಿಳಿಸಿತ್ತು.
ಜಾರಿ ನಿರ್ದೇಶನಾಲಯ(ಇಡಿ) ಫೆಬ್ರವರಿ 23 ರಂದು ನವಾಬ್ ಮಲಿಕ್ ಅವರನ್ನು ದಕ್ಷಿಣ ಮುಂಬೈನಲ್ಲಿರುವ ತನಿಖಾ ಸಂಸ್ಥೆಯ ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಿತ್ತು. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ಮಲಿಕ್ ಅವರನ್ನು ಮಾರ್ಚ್ 7ರ ವರೆಗೆ ತನ್ನ ವಶಕ್ಕೆ ಪಡೆದಿತ್ತು. ಪ್ರಸ್ತುತ ಮಲಿಕ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.





