ನವದೆಹಲಿ: ಬಿಜೆಪಿಗೆ ಏಕೈಕ ಪರ್ಯಾಯ ಆಮ್ ಆದ್ಮಿ ಪಕ್ಷ ಎಂದು ಬಿಂಬಿಸಿಕೊಳ್ಳುತ್ತಿರುವ ಎಎಪಿ, ಎರಡೂ ಪಕ್ಷಗಳ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಗುರುವಾರ ರಾಷ್ಟ್ರವ್ಯಾಪಿ ಸಮೀಕ್ಷೆ ಆರಂಭಿಸಿದೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ, ದೇಶಕ್ಕೆ ಇಂದು ಎರಡು ಆಯ್ಕೆಗಳು ಮಾತ್ರ ಉಳಿದಿವೆಯೇ ಎಂಬುದರ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಎಎಪಿ ಮತ್ತು ಬಿಜೆಪಿ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ರಾಷ್ಟ್ರವ್ಯಾಪಿ ಸಮೀಕ್ಷೆ ಪ್ರಾರಂಭಿಸುವುದಾಗಿ ಪ್ರಕಟಿಸಿದ ಅತಿಶಿ, ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (IVRS) ಮೂಲಕ ಕರೆಗಳು, ಮಿಸ್ಡ್ ಕಾಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ದೇಶಾದ್ಯಂತದ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.
ದೆಹಲಿಯಲ್ಲಿ ಈ ಸಮೀಕ್ಷೆಯ ಕುರಿತು ವಿವಿಧ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಸಹ ಹಾಕಲಾಗುವುದು ಎಂದು ಕಲ್ಕಾಜಿ ಶಾಸಕಿ ಹೇಳಿದರು.
"ಭಾರತೀಯ ಜನತಾ ಪಕ್ಷ ದೇಶಾದ್ಯಂತ ಹಿಂಸಾಚಾರ ಸೃಷ್ಟಿಸುತ್ತಿದ್ದು, ಅದು ಭಾರತೀಯ ಗೂಂಡಾ ಪಕ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಎಎಪಿ ಬಗ್ಗೆ ಜನರ ಅಭಿಪ್ರಾಯವನ್ನು ಕೇಳಲು ಪಕ್ಷ ಸಮೀಕ್ಷೆ ಆರಂಭಿಸಿದೆ, "ದೇಶಕ್ಕೆ ಇಂದು ಕೇವಲ ಎರಡು ಆಯ್ಕೆಗಳಿವೆ" ಎಂದು ಅವರು ಹೇಳಿದರು.





