ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಹೊಸ ಅಲೆ ಬಗ್ಗೆ ಆತಂಕಬೇಡ, ಆದರೆ ಆಸ್ಪತ್ರೆಗೆ ಸೇರ್ಪಡೆ ಬಗ್ಗೆ ನಮ್ಮ ಗಮನಹರಿಸಬೇಕಾಗಿದೆ ಎಂದು ಅನೇಕ ವಿಜ್ಞಾನಿಗಳು ಹೇಳಿದ್ದಾರೆ.
ಆನ್ ಲೈನ್ ತರಗತಿಗಾಗಿ ಶಾಲೆಗಳ ಪುನರಾರಂಭ, ಜನ ಗುಂಪುಗೊಡುವಿಕೆ ಹೆಚ್ಚಳ, ಆರ್ಥಿಕ ಚಟುವಟಿಕೆ, ಕೋವಿಡ್-19 ನಿಯಮಗಳ ರದ್ದತಿಯಿಂದಾಗಿ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎರಡು ವಾರಗಳಿಂದಲೂ ಎಲ್ಲಾ ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ರಜೆ ದಿನಗಳಲ್ಲಿ ಜನರು ಹೆಚ್ಚಾಗಿ ಗುಂಪು ಸೇರುತ್ತಿದ್ದಾರೆ. ಇದು ಕೂಡಾ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದ್ದು, ನಿಗಾ ವಹಿಸುವಿಕೆ ಮುಂದುವರೆಸಬೇಕಾಗಿದೆ ಎಂದು ಸಾಂಕ್ರಾಮಿಕ ರೋಗತಜ್ಞ ಚಂದ್ರಕಾಂತ್ ಲಹಾರಿಯಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಆಸ್ಪತ್ರೆಗೆ ಸೇರುವವರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಅಥವಾ ಭಾಗಶ: ಬದಲಾವಣೆಯಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ನಾಲ್ಕನೇ ಅಲೆ ಆರಂಭ ಎಂದರ್ಥವಲ್ಲಾ, ಸಾರ್ಸ್ ಕೋವ್-2 ಧೀರ್ಘಕಾಲದಿಂದ ನಮ್ಮೊಂದಿಗೆ ಇದೆ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಸೋಮವಾರ 501 ಹೊಸ ಪ್ರಕರಣಗಳೊಂದಿಗೆ ಸೋಂಕಿನ ಪ್ರಮಾಣ ಶೇ. 7.72ಕ್ಕೆ ಏರಿಕೆಯಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.




