ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಸಿಬಿಐ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸರ್ಕಾರಿ ಉದ್ಯೋಗಿಗಳಿಗೆ ಗುಂಪು ವೈದ್ಯಕೀಯ ವಿಮಾ ಯೋಜನೆಗೆ ಗುತ್ತಿಗೆ ನೀಡುವಲ್ಲಿ ಮತ್ತು ರಾಜ್ಯದಲ್ಲಿನ ಕಿರು ಜಲವಿದ್ಯುತ್ ಯೋಜನೆ ಕಾಮಗಾರಿಗೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ದಾಖಲಾದ ನಂತರ, ಸಿಬಿಐ ಗುರುವಾರ ಬೆಳಿಗ್ಗೆ ಜಮ್ಮು, ಶ್ರೀನಗರ, ದೆಹಲಿ, ಮುಂಬೈ, ಉತ್ತರ ಪ್ರದೇಶದ ನೋಯ್ಡಾ, ಕೇರಳದ ತಿರುವನಂತಪುರ ಮತ್ತು ಬಿಹಾರದ ದರ್ಭಾಂಗ ಸೇರಿದಂತೆ 14 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿತು.
2018ರ ಆಗಸ್ಟ್ 31ರಂದು ನಡೆದ ರಾಜ್ಯ ಆಡಳಿತ ಮಂಡಳಿ ಸಭೆಯಲ್ಲಿ ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಉದ್ಯೋಗಿಗಳಿಗೆ ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿ ಗುತ್ತಿಗೆ ನೀಡುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದರು. ಆದರೆ, ಗುತ್ತಿಗೆ ನೀಡುವಾಗ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಷರತ್ತುಗಳನ್ನು ತೆಗೆದು ಗುತ್ತಿಗೆ ನೀಡಲಾಗಿದೆ. ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಹಾಗೂ ಟ್ರಿನಿಟಿ ಮರು-ವಿಮಾ ಬ್ರೋಕರ್ಸ್ ಸಂಸ್ಥೆಯನ್ನು ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಸಿಬಿಐ ನಮೂದಿಸಿದೆ.
ಕಿರು ಜಲವಿದ್ಯುತ್ ಯೋಜನೆಯ ಕಾಮಗಾರಿ ಪ್ಯಾಕೇಜ್‌ನ ಗುತ್ತಿಗೆ ನೀಡುವಲ್ಲಿ ಅವ್ಯವಹಾರ ನಡೆದಿದೆ. ಇ-ಟೆಂಡರ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಅನುಸರಿಸಲಾಗಿಲ್ಲ ಎಂದು ಸಿಬಿಐ ಹೇಳಿದೆ. ಚಿನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್‌ನ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ, ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಬಾಬು, ಮಾಜಿ ನಿರ್ದೇಶಕರಾದ ಎಂ.ಕೆ.ಮಿತ್ತಲ್, ಅರುಣ್ ಕುಮಾರ್ ಮಿಶ್ರಾ ಹಾಗೂ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.





