ರಸ್ತೆಬದಿಯ ಆಹಾರ ಯಾರಿಗೆ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರೂ ಸಂಜೆಯಾಗುತ್ತಿದ್ದಂತೆ ಯಾವುದಾದರೊಂದು ಫಾಸ್ಟ್‌ಫುಡ್ ಅಂಗಡಿ ಬಳಿ ಬಿಸಿಬಿಸಿ ಬೋಂಡಾ, ಬಜ್ಜೆ ಸವಿಯುವವರೇ.. ಆದರೆ, ಈ ತಿಂಡಿಯನ್ನು ಕರಿಯಲು ಬಳಸುವ ಎಣ್ಣೆಯನ್ನು ಎಂದಾದರೂ ಗಮನಿಸಿದ್ದೀರಾ?.. ಇಲ್ಲವಾದರೆ, ಒಮ್ಮೆ ಗಮನಿಸಿ. ಆ ಎಣ್ಣೆ ಗಾಢ ಕಪ್ಪು ಬಣ್ಣಕ್ಕೆ ತಿರುಗಿದ್ದರೆ, ಅಲ್ಲಿ ತಿಂಡಿ ತಿನ್ನದಿರುವುದೇ ಉತ್ತಮ. ಏಕೆಂದರೆ ಅದು ಪದೇ ಪದೇ ಬಳಕೆಯಾದ ಎಣ್ಣೆ. ಇದನ್ನು ಸೇವಿಸುವುದರಿಂದ, ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಕೇವಲ ಬೀದಿಬದಿಯಷ್ಟೇ ಅಲ್ಲ, ರೆಸ್ಟೋರೆಂಟ್ ಅಥವಾ ಸ್ವಂತ ಮನೆಯಲ್ಲಿಯೇ ಆದರೂ, ಪದೇ ಪದೇ ಬಿಸಿ ಮಾಡಿದ ಎಣ್ಣೆ ಹಾನಿಕಾರಕ. ಇದರಿಂದ ಆಗುವ ಅಡ್ಡಪರಿಣಾಮಗಳೇಣು ನೋಡೋಣ.
ನೀವು ಅಡುಗೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿದಾಗ ಏನಾಗುತ್ತದೆ?
ಅಡುಗೆ ಎಣ್ಣೆಯು ಗಾಢ ಕಂದು, ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಿರಬಹುದು. ಎಣ್ಣೆಯನ್ನು ಹಲವಾರು ಬಾರಿ ಬಿಸಿ ಮಾಡುವುದರಿಂದ ಇದು ಸಂಭವಿಸುತ್ತದೆ. ಆದರೆ, ಅಡುಗೆ ಎಣ್ಣೆಯ ಮರುಬಳಕೆಯು ಎಣ್ಣೆಯ ಎಲ್ಲಾ ಉತ್ತಮ ಗುಣಗಳನ್ನು ನಾಶಪಡಿಸುತ್ತದೆ. ಈ ಸಾಮಾನ್ಯ ಅಭ್ಯಾಸವು ಹೆಚ್ಚಾಗಿ ರೆಸ್ಟೋರೆಂಟ್‌ಗಳು, ಫುಡ್ ಜಾಯಿಂಟ್‌ಗಳು ಮತ್ತು ಸ್ಟಾಲ್‌ಗಳಲ್ಲಿ ನಡೆಯುತ್ತದೆ. ಇದನ್ನರಿಯದ ನಾವು, ಅದನ್ನೇ ಸೇವಿಸುತ್ತೇವೆ. ಇದು ಆರೋಗ್ಯದ ಮೇಲೆ ಹಲವಾರು ಪರಿಣಾಮ ಉಂಟುಮಾಡುತ್ತವೆ.
ಅಡುಗೆ ಎಣ್ಣೆಯನ್ನು ಪದೇ ಪದೇ ಬಿಸಿಮಾಡಿ ಸೇವಿಸುವುದರಿಂದ ಉಂಟಾಗುವ ಅಪಾಯಗಳು ಹೀಗಿವೆ
1. ಎಣ್ಣೆಯಲ್ಲಿ ಕಾರ್ಸಿನೋಜೆನಿಕ್ ಅಂಶ ಬೆಳೆಯುವುದು:
ಕಾರ್ಸಿನೋಜೆನಿಕ್ ಎಂಬ ಪದವನ್ನು ನೀವು ಕೇಳುತ್ತಿದ್ದಂತೆ, ನಿಮಗೆ ಕ್ಯಾನ್ಸರ್‌ಗೆ ಸಂಬಂಧಿಸಿದ ವಿಷಯ ನೆನಪಾಗುತ್ತದೆ. ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದರಿಂದ ಕ್ಯಾನ್ಸರ್ ರೋಗಲಕ್ಷಣಗಳು ಉಂಟಾಗಬಹುದು ಎಂಬುದಕ್ಕೆ ಹಲವಾರು ಸಂಶೋಧನೆಗಳು ಸಿಕ್ಕಿವೆ. ಈ ಅಡುಗೆ ಎಣ್ಣೆಯನ್ನು ಬಳಸುವುದರಿಂದ ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳು ಹೆಚ್ಚಾಗಿ, ಇದು ಉರಿಯೂತಕ್ಕೆ ಕಾರಣವಾಗುತ್ತದೆ. ಮತ್ತೆ ಬಳಸಿದ ಅಡುಗೆ ಎಣ್ಣೆಯಲ್ಲಿ ಇರುವ ವಿಷಕಾರಿ ಅಂಶಗಳು ಬೊಜ್ಜು, ಹೃದ್ರೋಗ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದ ಉರಿಯೂತವು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ, ವಿವಿಧ ರೀತಿಯ ಸೋಂಕುಗಳಿಗೆ ಒಳಗಾಗುವಂತೆ ಮಾಡುತ್ತದೆ.
2. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವುದು
ಪದೇ ಪದೇ ಬಳಸಿದ ಅಡುಗೆ ಎಣ್ಣೆಯಲ್ಲಿ ಮತ್ತೆ ಆಹಾರ ತಯಾರಿಸಿದರೆ, ಅದು ಖಂಡಿತವಾಗಿಯೂ ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಆ ಕಪ್ಪು ಹೊಗೆಯಾಡಿದ ಎಣ್ಣೆಯು ಹೃದಯ ಸಮಸ್ಯೆ, ಪಾರ್ಶ್ವವಾಯು ಮತ್ತು ಎದೆ ನೋವಿನ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಆರೋಗ್ಯ ಸಮಸ್ಯೆಗಳಿಲ್ಲದೆ ಆರೋಗ್ಯಕರ ಜೀವನವನ್ನು ಬಯಸಿದರೆ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಪ್ಪಿಸಬೇಕು.
3. ಅಸಿಡಿಟಿ ಹೆಚ್ಚಿಸುವುದು
ನಿಮ್ಮ ಹೊಟ್ಟೆ ಮತ್ತು ಗಂಟಲಿನಲ್ಲಿ ನಿರಂತರ ಸುಡುವ ಸಂವೇದನೆಯನ್ನು ಹೊಂದಿದ್ದರೆ, ಇದು ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡಿ ಬಳಸುವುದರಿಂದ ಆಗಿರಬಹುದು. ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವ ಯಾವುದೇ ರೀತಿಯ ಆಮ್ಲೀಯತೆ ಅಥವಾ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಹಿಂದೆ ಕೆಟ್ಟ ಅಡುಗೆ ಎಣ್ಣೆಯು ಮುಖ್ಯ ಕಾರಣವಾಗಿರಬಹುದು. ಡೀಪ್ ಫ್ರೈಡ್ ಆಹಾರವು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಕಾಲಕಾಲಕ್ಕೆ ಹೊಟ್ಟೆಯಲ್ಲಿ ನೋವನ್ನು ಉಂಟುಮಾಡುತ್ತದೆ. ಆದ್ದರಿಂದ ಜಂಕ್ ಫುಡ್ ಮತ್ತು ಕರಿದ ಆಹಾರವನ್ನು ಹೆಚ್ಚಾಗಿ ತ್ಯಜಿಸುವುದು ಉತ್ತಮ.
ಪದೇ ಪದೇ ಬಿಸಿ ಮಾಡಿದ ಅಡುಗೆ ಎಣ್ಣೆಯನ್ನು ತಪ್ಪಿಸುವುದು ಹೇಗೆ?
ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ
ತಾಜಾ ಮತ್ತು ಆರೋಗ್ಯಕರ ಆಹಾರದ ಸೇವನೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವೆಂದರೆ ಮನೆಯಲ್ಲಿ ತಯಾರಿಸಿದ ಊಟವನ್ನು ಅವಲಂಬಿಸುವುದು. ತಾಜಾ ಎಣ್ಣೆಯಲ್ಲಿ ತಯಾರಿಸಿದ ಮತ್ತು ಕಡಿಮೆ ಕರಿದ ಮನೆ ಆಹಾರಕ್ಕೆ ಬದಲಾದ ನಂತರ ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ಬದಲಾವಣೆಯನ್ನು ಖಂಡಿತವಾಗಿ ಗಮನಿಸಬಹುದು. ಮನೆಯಲ್ಲಿ ತಯಾರಿಸಿದ ಆಹಾರವು ನಿಮಗೆ ಸಮತೋಲಿತ ಪೋಷಕಾಂಶವನ್ನು ಒದಗಿಸುತ್ತದೆ, ಇದರಲ್ಲಿ ಪ್ರೋಟೀನ್ಗಳು, ಫೈಬರ್, ಕಾರ್ಬೋಹೈಡ್ರೇಟ್ಗಳು ಮತ್ತು ಆರೋಗ್ಯಕರ ಕೊಬ್ಬುಗಳಿರುತ್ತವೆ. ಈ ಮೂಲಕ ಮತ್ತೆ ಬಿಸಿಮಾಡಿದ ಅಡುಗೆ ಎಣ್ಣೆಯಿಂದ ಉಂಟಾಗಬಹುದಾದ ಆರೋಗ್ಯದ ಅಪಾಯಗಳನ್ನು ತಪ್ಪಿಸಬಹುದು.
2. ಸಣ್ಣ ಪ್ರಮಾಣದಲ್ಲಿ ಆಹಾರ ತಯಾರಿಸಿ
ಹೆಚ್ಚುವರಿ ಅಡುಗೆ ಎಣ್ಣೆಯನ್ನು ಕಡಿಮೆ ಮಾಡಲು ಇದು ನಿಮಗೆ ಪರಿಣಾಮಕಾರಿ ಮಾರ್ಗವಾಗಿದೆ. ಇರುವ ಜನರಿಗೆ ಆಹಾರ ತಯಾರಿಸಲು ಅಗತ್ಯವಿರುವ ಆಹಾರದ ಪ್ರಮಾಣವನ್ನು ಲೆಕ್ಕಹಾಕಿ. ಇದರಿಂದ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು. ತಾಜಾ ಆಹಾರವನ್ನು ತಯಾರಿಸುವುದರಿಂದ, ದೇಹದಲ್ಲಿ ಉರಿಯೂತದ ಅಪಾಯವನ್ನು ಕಡಿಮೆ ಮಾಡುತ್ತದೆ. ಸೀಮಿತ ಪ್ರಮಾಣದಲ್ಲಿ ತಿನ್ನುವುದು ಸಹ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟದ ಮೇಲೆ ಪರಿಣಾಮ ಬೀರುತ್ತದೆ.
3. ಪ್ರಯಾಣ ಮಾಡುವಾಗ ಮನೆಯಿಂದಲೇ ಆಹಾರ ತಯಾರಿಸಿ, ಕೊಂಡೊಯ್ಯಿರಿ
ಪ್ರಯಾಣದ ಒಂದು ಪ್ರಮುಖ ನ್ಯೂನತೆಯೆಂದರೆ, ದಾರಿಯಲ್ಲಿ ತ್ವರಿತ ಆಹಾರ ಅಥವಾ ಜಂಕ್ ಫುಡ್ ತಿನ್ನಲು ಮುಂದಾಗುವುದು. ಇದು ಅನಗತ್ಯ ಕ್ಯಾಲೊರಿಗಳನ್ನು ಹೊಂದಿರಬಹುದು. ಅದಕ್ಕಿಂತ ಮುಖ್ಯವಾಗಿ ಅಲ್ಲಿ ಸಿಗುವ ಆಹಾರವನ್ನು ಪದೇ ಪದೇ ಬಿಸಿಮಾಡಿದ ಎಣ್ಣೆಯಿಂದಲೇ ತಯಾರಿಸಬಹುದು. ಫಾಸ್ಟ್‌ಫುಡ್ ಆಹಾರವನ್ನು ಕಡಿಮೆ ಮಾಡುವುದು ಮತ್ತು ಮನೆಯಲ್ಲಿ ಊಟ ತಯಾರಿಸಿ, ಕೊಂಡೊಯ್ಯುವುದು ನಿಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು.





