ಕಾಸರಗೋಡು: ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಧೀರ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಪೈವಳಿಕೆ ಪಂಚಾಯತಿ ಕುಟುಂಬಶ್ರೀ ಸಭಾಂಗಣದಲ್ಲಿ ಕಾಸರಗೋಡು ಪೋಲೀಸ್ ಉಪ ಅಧೀಕ್ಷಕ ಪಿ ಬಾಲಕೃಷ್ಣನ್ ನಾಯರ್ ಜಿಲ್ಲಾ ಮಟ್ಟದ ಯೋಜನೆಯನ್ನು ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷ ಕೆ. ಜಯಂತಿ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಎ.ಬಿಂದು ಯೋಜನೆ ವಿವರಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಚಿಪ್ಪಾರ್, ಝಡ್.ಎ.ಕಯ್ಯಾರ್, ಶಾಜಿ, ಐಸಿಡಿಎಸ್‍ನ ಮೇಲ್ವಿಚಾರಕಿ ಎಂ. ಸ್ಟೆಫಿ ರಾಜನ್ ಮತ್ತಿತರರು ಮಾತನಾಡಿದರು. ಮಂಜೇಶ್ವರ ಸಿಡಿಪಿಒ ಪಿ ಜ್ಯೋತಿ ಸ್ವಾಗತಿಸಿ, ಸಂರಕ್ಷಣಾಧಿಕಾರಿ ಎ.ಜಿ.ಫೈಸಲ್ ವಂದಿಸಿದರು.
ಯೋಜನೆ ಏನು:
ಹಿಂಸಾಚಾರದ ಸಂದರ್ಭದಲ್ಲಿ ಮಹಿಳೆಯರಿಗೆ ರಕ್ಷಣಾತ್ಮಕ ತರಬೇತಿ ಮತ್ತು ಆತ್ಮರಕ್ಷಣೆಗಾಗಿ ಆತ್ಮವಿಶ್ವಾಸ ಮೂಡಿಸಲು 'ಧೀರ' ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಜಿಲ್ಲೆಯ ಪೈವಳಿಕೆ, ಕುತ್ತಿಕೋಲ್ ಮತ್ತು ಅಜಾನೂರು ಪಂಚಾಯಿತಿಗಳಲ್ಲಿ ಮೊದಲ ಹಂತದ ಧೀರ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 10 ರಿಂದ 15 ವರ್ಷದೊಳಗಿನ 30 ಬಾಲಕಿಯರನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ 90 ಬಾಲಕಿಯರಿಗೆ 10 ತಿಂಗಳ ಆತ್ಮರಕ್ಷಣೆ ತರಬೇತಿ ನೀಡಲಾಗುವುದು. ಆಯಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಂಗನವಾಡಿ ಕೇಂದ್ರಿತ ಕಿಶೋರ ಕ್ಲಬ್‍ಗಳ ಮೂಲಕ ಪ್ರಾಥಮಿಕ ವಿಚಾರಣೆ ನಡೆಸಿ ಸಿದ್ಧಪಡಿಸಿದ ಪಟ್ಟಿಯಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ನೇತೃತ್ವದ ಸಮಿತಿಯು ಬಾಲಕಿಯರನ್ನು ತರಬೇತಿಗೆ ಆಯ್ಕೆ ಮಾಡುತ್ತದೆ. ಪೋಷಕರನ್ನು ಕಳೆದುಕೊಂಡವರು, ದೌರ್ಜನ್ಯಕ್ಕೆ ಒಳಗಾದವರು ಮತ್ತು ಅಸುರಕ್ಷಿತ ಸ್ಥಿತಿಯಲ್ಲಿ ಬದುಕುತ್ತಿರುವವರಿಗೆ ಆದ್ಯತೆ ನೀಡಲಾಗುವುದು.
ರಾಜ್ಯದಲ್ಲಿ ಈ ಯೋಜನೆಗೆ ಸರ್ಕಾರ ಒಟ್ಟು `68 ಲಕ್ಷ ಮೀಸಲಿಟ್ಟಿದೆ. ತರಗತಿಗಳು ವಾರದಲ್ಲಿ ನಾಲ್ಕು ಗಂಟೆಗಳಿರುತ್ತದೆ, ಶನಿವಾರ ಮತ್ತು ಭಾನುವಾರದಂದು ಎರಡು ಗಂಟೆಗಳ ತರಗತಿಗಳು ನಡೆಯಲಿವೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವುದು, ಹಿಂಸೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸ್ವಯಂ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಯೋಜನೆಯ ಮುಖ್ಯ ಉದ್ದೇಶಗಳಾಗಿವೆ. . ಮಕ್ಕಳು ಮತ್ತು ತರಬೇತುದಾರರನ್ನು ಗುರುತಿಸಿದ ನಂತರ, ಸಮರ ಕಲೆಗಳಿಗೆ ಸೂಕ್ತವಾದ ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ. ಕಾಸರಗೋಡು ಜಿಲ್ಲೆಯಲ್ಲಿ ಕರಾಟೆ, ಟೈಕೊಂಡೋ ಮುಂತಾದ ಸಮರ ಕಲೆಗಳನ್ನು ಕಲಿಸಲಾಗುತ್ತದೆ. ತರಬೇತಿಯ ನಂತರ ಪ್ರತಿ ದಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುವುದು.





