ಕಾಸರಗೋಡು: ಉಡುಪಿ-ಕರಿಂದಳಂ-ವಯನಾಡು ಹಸಿರು ವಿದ್ಯುತ್ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಕಾಸರಗೋಡಿನ ವಿದ್ಯುತ್ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ.
ಅವರು ಕಾಸರಗೋಡು ವಿದ್ಯುತ್ ಭವನ ಮತ್ತು ಮುಳ್ಳೇರಿಯ ಎಲೆಕ್ಟ್ರಿಕಲ್ ವಿಭಾಗದ ಕಚೇರಿಯ ನೂತನ ಕಟ್ಟಡವನ್ನು ಆನ್‍ಲೈನ್ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಜನತೆಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಖಚಿತಪಡಿಸಿಕೊಳ್ಳಲು ಸರ್ಕಾರ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುತ್ತಿದೆ. ನೆಲ್ಲಿಕುನ್ನು ವಿಭಾಗವನ್ನು ವಿಭಜಿಸಿ ಹೊಸದಾಗಿ ವಿದ್ಯಾನಗರ ಜತೆಗೆ ಬೋವಿಕ್ಕಾನ, ಅಡೂರು ವಿಭಾಗೀಯ ಕಚೇರಿಗಳನ್ನು ಆರಂಭಿಸಬೇಕು ಎಂಬ ಜನಪ್ರತಿನಿಧಿಗಳ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಶಾಸಕರಾದ ಸಿ.ಎಚ್. ಕುಂಞಂಬು, ಇ ಚಂದ್ರಶೇಖರನ್, ಎಕೆಎಂ ಅಶ್ರಫ್, ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ.ಎಂ. ಮುನೀರ್, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎ ಸೈಮಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಾಸ್ಮಿನ್ ಕಬೀರ್, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ, ವಿವಿರ್ಧ ರಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೆಎಸ್‍ಇಬಿ ವಿತರಣಾ ನಿರ್ದೇಶಕ ಸಿ.ಸುರೇಶ್ ಕುಮಾರ್ ವರದಿ ಮಂಡಿಸಿದರು. ಕೆಎಸ್‍ಇಬಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಅಶೋಕ್ ಸ್ವಾಗತಿಸಿದರು. ಕೆಎಸ್‍ಇಬಿ ಉತ್ತರ ಮಲಬಾರ್ ವಿತರಣಾ ಮುಖ್ಯ ಎಂಜಿನಿಯರ್ ಎನ್.ಎಲ್. ಬಿಜೋಯ್ ವಂದಿಸಿದರು.


