ಕಾಸರಗೋಡು: ಜಿಲ್ಲೆಯ ಪ್ರಮುಖ ಕುಟುಂಬಶ್ರೀ ಉದ್ಯಮಿಗಳು ಉತ್ಪಾದಿಸುವ 'ಸಫಲಮ್ ಗೋಡಂಬಿ' ಮತ್ತು 'ಜೀವಾ ಹನಿ' ಉತ್ಪನ್ನಗಳು ಇನ್ನುಮುಂದೆ ಕಾಸರಗೋಡು ಮತ್ತು ಕಾಞಂಗಾಡು ರೈಲು ನಿಲ್ದಾಣಗಳಲ್ಲಿ ಲಭ್ಯವಾಗಲಿದೆ.
ಭಾರತೀಯ ರೈಲ್ವೇಯಿಂದ ಜಾರಿಗೆ ಬಂದಿರುವ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯನ್ವಯ ಕುಟುಂಬಶ್ರೀ ಉತ್ಪನ್ನಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು ಆರಂಭಿಸಲಾಗಿದೆ. ಘಟಕಗಳು ರೂ.1000 ಪರವಾನಗಿ ಶುಲ್ಕ ಮತ್ತು ರೂ.188 ವಿದ್ಯುತ್ ಶುಲ್ಕವನ್ನು ರೈಲ್ವೆ ಇಲಾಖೆಗೆ ತೆರಬೇಕಾಗಿದೆ. ಎರಡೂ ಘಟಕಗಳಲ್ಲಿ ತಲಾ ಒಬ್ಬಮಹಿಳಾ ಉದ್ಯೋಗಿ ಮಾರಾಟ ಕೇಂದ್ರದಲ್ಲಿ ಕೆಲಸ ನಿರ್ವಹಿಸಲಿದ್ದಾರೆ.
ಕೇರಳದಲ್ಲಿ ಕಾಸರಗೋಡು ಜಿಲ್ಲಾ ಕುಟುಂಬಶ್ರೀ ಮಿಷನ್‍ಗೆ ಮಾತ್ರ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಲ್ಲಿ ಅವಕಾಶ ಲಭ್ಯವಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಎರಡು ಪ್ರಮುಖ ನಿಲ್ದಾಣಗಳಲ್ಲಿ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಜಿಲ್ಲೆಯ ಮಂಜೇಶ್ವರಂ, ಉಪ್ಪಳ, ಕುಂಬಳೆ, ಕೊಟ್ಟಿಕುಳಂ ಮತ್ತು ಬೇಕಲ್ ಸ್ಟೇಷನ್‍ಗಳಿಗೂ ಕುಟುಂಬಶ್ರೀ ಉದ್ಯಮ ವಿಸ್ತರಿಸಲಾಗುವುದು ಎಂದು ಕುಟುಂಬಶ್ರೀ ಅಧಿಕಾರಿಗಳು ತಿಳಿಸಿದ್ದಾರೆ.
ಕಾಞಂಗಾಡ್ ಮತ್ತು ಕಾಸರಗೋಡು ರೈಲ್ವೆ ನಿಲ್ದಾಣಗಳಲ್ಲಿ ಕುಟುಂಬಶ್ರೀ ಸ್ಟಾಲ್‍ಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಕಾಞಂಗಾಡಿನಲ್ಲಿ ಸ್ಟೇಷನ್ ಮಾಸ್ಟರ್ ಪ್ರಶಾಂತ್ ಮತ್ತು ಕಾಸರಗೋಡು ಸ್ಟೇಷನ್ ಮಾಸ್ಟರ್ ರಾಮ್ ಖಿಲಾಡಿ ಮೀನಾ ಮಳಿಗೆ ಉದ್ಘಾಟಿಸಿದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಉಪಸ್ಥಿತರಿದ್ದರು.


