ನವದೆಹಲಿ: 'ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳು ಸಮಾನವಾದುದು. ಸಂಸದರು ಯಾವುದೇ ಧರ್ಮ ಕುರಿತಂತೆ ಪ್ರಚೋದನಾಕಾರಿ ಹೇಳಿಕೆಯನ್ನು ನೀಡದೇ ಸಂಸತ್ತಿನ ಘನತೆಯನ್ನು ಎತ್ತಿಹಿಡಿಯಬೇಕು' ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
0
samarasasudhi
ಜೂನ್ 19, 2022
ನವದೆಹಲಿ: 'ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳು ಸಮಾನವಾದುದು. ಸಂಸದರು ಯಾವುದೇ ಧರ್ಮ ಕುರಿತಂತೆ ಪ್ರಚೋದನಾಕಾರಿ ಹೇಳಿಕೆಯನ್ನು ನೀಡದೇ ಸಂಸತ್ತಿನ ಘನತೆಯನ್ನು ಎತ್ತಿಹಿಡಿಯಬೇಕು' ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಸ್ಪೀಕರ್ ಆಗಿ ಭಾನುವಾರ ಮೂರು ವರ್ಷದ ಅಧಿಕಾರವಧಿ ಪೂರೈಸಿದ ಅವರು, 'ಈ ಅವಧಿಯಲ್ಲಿ ನೀಡಿದ ಸಹಕಾರಕ್ಕಾಗಿ ಎಲ್ಲ ಪಕ್ಷಗಳಿಗೂ ಕೃತಜ್ಞತೆ ಸಲ್ಲುತ್ತವೆ. ಈ ಅವಧಿಯಲ್ಲಿ ಸಂಸತ್ತಿನ ಉತ್ಪಾದಕತೆ ಪ್ರಮಾಣ ಶೇ 100ಕ್ಕಿಂತ ಹೆಚ್ಚಿತ್ತು' ಎಂದರು.
'17ನೇ ಲೋಕಸಭೆಯಲ್ಲಿ ಒಟ್ಟು ಎಂಟು ಅಧಿವೇಶನಗಳು ನಡೆದಿವೆ. ಸುಮಾರು 1,000 ಗಂಟೆ ಕಲಾಪ ನಡೆದಿದೆ. ಸಂಸತ್ತಿನ ಕಲಾಪ ಮತ್ತು ಚರ್ಚೆಗಳು ಪ್ರಜಾಪ್ರಭುತ್ವದ ಆಭರಣಗಳಿದ್ದಂತೆ' ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
'ಚರ್ಚೆಯು ಪ್ರಜಾಪ್ರಭುತ್ವದ ನಿರ್ಣಾಯಕವಾದ ಭಾಗ. ಸಂಸದರು ಕಲಾಪದ ಅವಧಿಯಲ್ಲಿ ಅನಗತ್ಯವಾಗಿ ಕೂಗಾಡಬಾರದು. ವ್ಯಂಗ್ಯ, ಪರಸ್ಪರ ಕಾಲೆಳೆಯುವಿಕೆ ಸ್ವೀಕಾರ್ಹ. ಆದರೆ, ಅನಗತ್ಯವಾಗಿ ಕೂಗಾಡುವುದು, ಭಾಷಣಕ್ಕೆ ಅಡ್ಡಿಪಡಿಸುವುದು ಸರಿಯಲ್ಲ' ಎಂದರು.
ಪರಸ್ಪರ ಟೀಕೆ, ಆಧಾರರಹಿತ ಆರೋಪಗಳಿಗೆ ಸಂಸತ್ತನ್ನು ವೇದಿಕೆಯಾಗಿ ಬಳಸಿಕೊಳ್ಳಬಾರದು. ಧರ್ಮವನ್ನು ಕುರಿತಂತೆ ಇತ್ತೀಚಿಗೆ ರಾಜಕಾರಣಿಗಳ ನಡುವೆ ಪರಸ್ಪರ ವಾಕ್ಸಮರ ನಡೆದಿದೆ. ಸಂವಿಧಾನದ ಪ್ರಕಾರ, ಎಲ್ಲ ಧರ್ಮಗಳು ಸಮಾನವಾದುದು. ಈ ಸಂಬಂಧ ಪ್ರಚೋದನಾಕಾರಿ ಹೇಳಿಕೆಯನ್ನು ನೀಡುವುದು ಸಲ್ಲದು ಎಂದು ಪ್ರತಿಪಾದಿಸಿದರು.
'ಧರ್ಮದ ಬಗ್ಗೆ ನೀಡುವ ಹೇಳಿಕೆಯು ಯಾರೊಬ್ಬರಿಗೂ ಘಾಸಿ ಉಂಟು ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನು ವಹಿಸಬೇಕು. ಇಂತದೊಂದು ಸಂವೇದನೆಯನ್ನು ಕಲಾಪ, ಚರ್ಚೆಯ ವೇಳೆ ಪ್ರಜ್ಞಾಪೂರ್ವಕವಾಗಿ ಅನುಸರಿಸಬೇಕು. ಸಂವಿಧಾನವು ಎಲ್ಲರಿಗೂ ಅವರದೇ ಆದ ಧರ್ಮವನ್ನು ಪರಿಪಾಲಿಸಲು ಹಕ್ಕು ನೀಡಿದೆ ಎಂಬುದನ್ನು ಮರೆಯಬಾರದು ಎಂದು ಓಂ ಬಿರ್ಲಾ ಸಲಹೆ ನೀಡಿದರು.