ತಿರುವನಂತಪುರ: ಕೇರಳದ ವಿಝಿಂಜಂನಿಂದ ಕಾಸರಗೋಡುವರೆಗಿನ ಕರಾವಳಿಯಲ್ಲಿ ಭಾನುವಾರದವರೆಗೆ ಎತ್ತರದ ಅಲೆಗಳು ಮತ್ತು ಚಂಡಮಾರುತದ ಆರ್ಭಟ ಉಂಟಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಸಾಗರ ಸಮೀಕ್ಷೆ ಮತ್ತು ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ. ಭಾನುವಾರ ರಾತ್ರಿ 11.30ರ ವರೆಗೆ ಮೂರು ಮೀಟರ್‍ನಿಂದ 3.2 ಮೀಟರ್ ಎತ್ತರದ ಅಲೆ ಏಳಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಸಮುದ್ರದ ಪ್ರಕ್ಷುಬ್ಧತೆ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಅಧಿಕಾರಿಗಳ ಸೂಚನೆಯಂತೆ ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಜಾಗರೂಕರಾಗಿರಬೇಕು ಮತ್ತು ಅಪಾಯದ ಪ್ರದೇಶಗಳಿಂದ ದೂರವಿರಬೇಕು ಎಂದು ಸಂಶೋಧನಾ ಕೇಂದ್ರ ತಿಳಿಸಿದೆ. ಮೀನುಗಾರಿಕೆ ಹಡಗುಗಳು (ದೋಣಿಗಳು,ನಾವೆಗಳು, ಇತ್ಯಾದಿ) ಸುರಕ್ಷಿತವಾಗಿ ಬಂದರಿನಲ್ಲಿ ಲಂಗರು ಹಾಕಬೇಕು. ದೋಣಿಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದರಿಂದ ಘರ್ಷಣೆಯನ್ನು ತಪ್ಪಿಸಬಹುದು. ಕಡಲತೀರದ ಪ್ರವಾಸಗಳು ಮತ್ತು ಸಮುದ್ರದಲ್ಲಿನ ಚಟುವಟಿಕೆಗಳನ್ನು ತಪ್ಪಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ನಡುವೆ ನಾಳೆ ಐದು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಇಡುಕ್ಕಿ, ಮಲಪ್ಪುರ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ ಏತನ್ಮಧ್ಯೆ, ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡವು ತೀವ್ರ ಕಡಿಮೆ ಒತ್ತಡವಾಗಿ ಮಾರ್ಪಟ್ಟಿದೆ. ಮುಂದಿನ 24 ಗಂಟೆಗಳಲ್ಲಿ ಕಡಿಮೆ ಒತ್ತಡ ವಾಯುವ್ಯ ದಿಕ್ಕಿನಲ್ಲಿ ಚಲಿಸಬಹುದು. ಆಗ ಪಶ್ಚಿಮ ದಿಕ್ಕಿಗೆ ಚಲಿಸುವ ಮೂಲಕ ಕಡಿಮೆ ಒತ್ತಡ ಒಮನ್ ಕರಾವಳಿಯತ್ತ ಸಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.





