HEALTH TIPS

ಹಂದಿ ಚರ್ಮದ ಕಾರ್ನಿಯಾ ಕಸಿ: ಭಾರತ, ಇರಾನಿನ 20 ಜನರಿಗೆ ಸಿಕ್ಕಿದ ದೃಷ್ಟಿ

 

            ನವದೆಹಲಿ: ಕಾರ್ನಿಯಾ ಹಾನಿಯಿಂದ ದೃಷ್ಟಿ ಕಳೆದುಕೊಂಡಿದ್ದ ಭಾರತ ಮತ್ತು ಇರಾನಿನ 20 ಮಂದಿ ಅಂಧರಿಗೆ ಸಂಶೋಧಕರು ಹಂದಿಯ ಚರ್ಮದಿಂದ ರೂಪಿಸಿದ ಜೈವಿಕ ಕಾರ್ನಿಯಾ (ಕಣ್ಣಿನ ಅತ್ಯಂತ ಪಾರದರ್ಶಕ ಪದರ) ಕಸಿ ಮಾಡಿ, ದೃಷ್ಟಿ ಮರಳಿ ತಂದುಕೊಡಲು ಯಶಸ್ವಿಯಾಗಿದ್ದಾರೆ.

               ಅತ್ಯಂತ ವಿರಳವಾದ ಈ ಪ್ರಯೋಗ ಕಾರ್ನಿಯಾ ದೃಷ್ಟಿ ದೋಷ ಮತ್ತು ಮಂದ ದೃಷ್ಟಿ ಸಮಸ್ಯೆ ಅನುಭವಿಸುತ್ತಿರುವವರಿಗೆ ಆಶಾಕಿರಣ ಮೂಡಿಸಿದೆ.

                   ನವದೆಹಲಿಯ ಏಮ್ಸ್‌ನ ಸಂಶೋಧಕರು ಸೇರಿ ಅಂತರರಾಷ್ಟ್ರೀಯ ಸಂಶೋಧಕರ ತಂಡವು, ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆಗೆ ಎರಡು ವಾರಗಳವರೆಗೆ ಮಾತ್ರ ಸಂಗ್ರಹಿಸಿಡಬಹುದಾದ ದಾನಿಗಳ ಕಾರ್ನಿಯಾಕ್ಕೆ ಪರ್ಯಾಯವಾಗಿ ಜೈವಿಕ ಕಾರ್ನಿಯಾ ಕಸಿ ಮಾಡಿದ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದೆ.

                  ಭಾರತದ 8 ಮತ್ತು ಇರಾನಿನ 12 ಅಂಧರಿಗೆ ಎರಡು ವರ್ಷಗಳ ಹಿಂದೆ ಸಂಗ್ರಹಿಸಿಟ್ಟಿದ್ದ ಜೈವಿಕ ಕಾರ್ನಿಯಾವನ್ನು ಕಸಿ ಮಾಡಲಾಗಿದೆ. ಇದರ ಸಂಶೋಧನಾ ವರದಿಯೂ ನೇಚರ್ ಬಯೋಟೆಕ್ನಾಲಜಿ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿದೆ.

                 ಜೈವಿಕ ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆಯಿಂದ ದೃಷ್ಟಿ ಮರಳಿ ಪಡೆದ 20 ಮಂದಿಯಲ್ಲಿ 14 ಜನರಿಗೆ ಯಾವುದೇ ದೃಷ್ಟಿ ಸಮಸ್ಯೆ ಕಾಣಿಸಿಲ್ಲ. ಇದರಲ್ಲಿ ಮೂವರು ಭಾರತೀಯರಿಗೆ ಪೂರ್ಣ ದೃಷ್ಟಿ ಮರಳಿದೆ ಎಂದು ಸಂಶೋಧಕರು ಹೇಳಿದ್ದಾರೆ.

                 'ಈ ಸಂಶೋಧನೆಯಲ್ಲಿ ಲಭಿಸಿರುವ ಫಲಿತಾಂಶದಿಂದ ಒಂದು ಜೀವರಾಶಿ ಅಭಿವೃದ್ಧಿ ಸಾಧ್ಯವಾಗಲಿದೆ. ಇದು ಮಾನವ ಅಂಗಾಂಗಳ ಕಸಿಯ ಮಾನದಂಡಗಳಿಗೆ ಅನುಗುಣವಾಗಿದ್ದು, ಜೈವಿಕ ಕಸಿ ಕಾರ್ನಿಯಾಗಳನ್ನು ಸಮೂಹವಾಗಿ ಉತ್ಪಾದಿಸಲು ಮತ್ತು ಎರಡು ವರ್ಷಗಳವರೆಗೆ ಸಂಗ್ರಹಿಸಿಡಲು ಸಾಧ್ಯವೆನ್ನುವುದು ಸಾಬೀತಾಗಿದೆ' ಎಂದು ಸಂಶೋಧಕರ ತಂಡದಲ್ಲಿ ಒಬ್ಬರಾದ ಸ್ವೀಡನ್‌ನ ಲಿಂಕೊಪಿಂಗ್‌ ಯುನಿರ್ವಸಿಟಿಯ ಪ್ರೊಫೆಸರ್‌ ನೀಲ್‌ ಲಾಗಾಲಿ ಹೇಳಿದ್ದಾರೆ.

                'ವಿಶ್ವದಾದ್ಯಂತ ಅಂದಾಜು 1.27 ಕೋಟಿ ಜನರು ಕಾರ್ನಿಯಾ ಸಮಸ್ಯೆಯ ಅಂಧತ್ವದಿಂದ ಬಳಲುತ್ತಿದ್ದಾರೆ. ಹಂದಿ ಚರ್ಮದ ಜೈವಿಕ ಕಾರ್ನಿಯಾ ಕಸಿಯಿಂದ ಹೆಚ್ಚಿನವರಿಗೆ ದೃಷ್ಟಿ ಮರಳಿಸಲು ಸಾಧ್ಯವಾಗಲಿದೆ. ಆಹಾರೋದ್ಯಮದಲ್ಲಿ ಹಂದಿಯ ಚರ್ಮ ಉಪ ಉತ್ಪನ್ನವಾಗಿ ಬಳಕೆಯಲ್ಲಿದ್ದು, ಇದು ಸುಲಭವಾಗಿ ಲಭಿಸುತ್ತದೆ. ಜತೆಗೆ ಆರ್ಥಿಕವಾಗಿಯೂ ಲಾಭದಾಯಕ' ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries