ಬೀದಿ ನಾಯಿಗಳು ಮಾತ್ರವಲ್ಲ ಕೆಲವೊಮ್ಮೆ ಮನೆಯಲ್ಲಿ ಮುದ್ದಿನಿಂದ ಸಾಕಿದ ನಮ್ಮ ನಾಯಿಯೇ ಕಚ್ಚುವುದುಂಟು. ನಾಯಿ ಕಚ್ಚಿದರೆ ಮಾತ್ರವಲ್ಲ ಅದು ಪರಚಿದರೂ ಕೂಡಲೇ ಚಿಕಿತ್ಸೆ ಪಡೆಯಬೇಕು.ಅಲ್ಲದೆ ನಾಯಿ ಕಚ್ಚಿದಾಗ ಅಥವಾ ಪರಚಿದಾಗ ಆ ದಿನವೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು, ಆದರೆ ಚಿಕಿತ್ಸೆ ಪಡೆಯುವ ಮುನ್ನ ನೀವು ಕೆಲವೊಂದು ಕಾರ್ಯಗಳನ್ನು ಮಾಡಬೇಕು, ಇದರಿಂದ ನಾಯಿ ಕಚ್ಚಿದಾಗ ಉಂಟಾಗುವ ಅಪಾಯವನ್ನು ತಗ್ಗಿಸಬಹುದು.
ನಾಯಿ ಕಚ್ಚಿದಾಗ ಅಥವಾ ಪರಚಿದಾಗ ನೀವು ಮೊದಲು ಮಾಡಬೇಕಾಗಿರುವುದು:
* ಮೊದಲು ಗಾಯವನ್ನು ತೊಳೆಯಿರಿ: ಮೈಲ್ಡ್ ಸೋಪ್ ಹಚ್ಚಿ , ಹದ ಬಿಸಿ ನೀರಿನಿಂದ ತೊಳೆಯಿರಿ, ಹರಿಯುವ ನೀರಿನಲ್ಲಿ ಗಾಯವಾದ ಭಾಗವನ್ನು ಒಂದು ನಿಮಿಷ ಹಾಗೇ ಹಿಡಿಯಿರಿ.
* ಆಗ ರಕ್ತ ಹರಿಯುವುದು ಕಡಿಮೆಯಾದಾಗ ಸ್ವಚ್ಛವಾದ ಬಟ್ಟೆಯಿಂದ ಸ್ವಚ್ಛ ಮಾಡಿ.
* ಆ್ಯಂಟಿ ಬಯೋಟಿಕ್ ಕ್ರೀಮ್ ಇದ್ದರೆ ಹಚ್ಚಿದರೆ ಒಳ್ಳೆಯದು.
* ಗಾಯಕ್ಕೆ ಬ್ಯಾಂಡೇಜ್ ಹಾಕಿ ಸುತ್ತಿ.
ಆಸ್ಪತ್ರೆಗೆ ಹೋಗಿ
* ನಾಯಿ ಕಚ್ಚಿದ ದಿನವೇ ಆಸ್ಪತ್ರೆಗೆ ಹೋಗಿ ಚುಚ್ಚು ಮದ್ದು ಪಡೆಯಬೇಕು. ನಾಯಿ ಕಚ್ಚಿದರೆ ಅದೇ ದಿನ, 3, 7, 14, 28ನೇ ದಿನ ಚುಚ್ಚುಮದ್ದು ಪಡೆಯಬೇಕು. ಒಂದು ವೇಳೆ ನಿಮಗೆ ಕಚ್ಚಿದ ನಾಯಿಯ ಆರೋಗ್ಯ ಸ್ಥಿತಿ ನಿಮಗೆ ತಿಳಿಯದೇ ಹೋಗಿದ್ದರೆ ಅಂದರೆ ಆ ನಾಯಿ ಪತ್ತೆಯಾಗದಿದ್ದೆ 60 ಹಾಗೂ 90ನೇ ದಿನ ಕೂಡ ಚುಚ್ಚುಮದ್ದು ಪಡೆಯಬೇಕು.
* ವೈದ್ಯರು ಪರೀಕ್ಷೆ ಮಾಡಿದ ಬಳಿಕ ಕೂಡ ಗಾಯಕ್ಕೆ ಸುತ್ತಿದ ಬ್ಯಾಂಡೇಜ್ ಅನ್ನು ಆಗಾಗ ಬದಲಾಯಿಸಿ.
ಈ ಲಕ್ಷಣಗಳಿವೆಯೇ ಎಂದು ಗಮನಿಸಿ
ನಾಯಿ ಕಚ್ಚಿದ ಬಳಿಕ ಆ ಭಾಗದಲ್ಲಿ ಕೆಂಪಾಗುವುದು, ಊತ, ನೋವು, ಜ್ವರ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು.
ನಾಯಿ ಕಚ್ಚಿದಾಗ ಈ ರೀತಿ ಮಾಡಬೇಡಿ
ಕೆಲವರು ನಾಯಿ ಹಚ್ಚಿದಾಗ ಮನೆಮದ್ದು ಮಾಡಲು ಮುಂದಾಗುತ್ತಾರೆ. ಗಾಯಕ್ಕೆ ಹಸುವಿನ ಸೆಗಣಿ ಮೆತ್ತುವುದು, ಅರಿಶಿಣ ಪುಡಿ, ಮೆಣಸಿನ ಪುಡಿ, ಉಪ್ಪು, ತುಪ್ಪ ಹಚ್ಚುವುದು ಮಾಡುತ್ತಾರೆ, ಆದರೆ ಈ ರೀತಿಯೆಲ್ಲಾ ಮಾಡಲು ಹೋಗಬೇಡಿ, ಆದಷ್ಟು ಬೇಗ ಆಸ್ಪತ್ರೆಗೆ ಹೋಗಿ.
ನಾಯಿ ಕಚ್ಚುವುದು ತಡೆಗಟ್ಟುವುದು ಹೇಗೆ?
* ನಾಯಿಯನ್ನು ಸಾಕಲು ಆಯ್ಕೆ ಮಾಡುವಾಗ ಸ್ವಲ್ಪ ಸೌಮ್ಯ ಸ್ವಭಾವದ ನಾಯಿಯನ್ನು ಸಾಕಿ, ಇನ್ನು ಮನೆ ಕಾವಲಿಗೆ ಸ್ವಲ್ಪ ಜೋರಾದ ನಾಯಿ ಬೇಕೆಂದು ಬಯಸುವುದಾದರೆ ನೀವು ಅಂಥ ನಾಯಿಯಿಂದ ಮಕ್ಕಳನ್ನು ದೂರವಿಡಿ, ನೀವು ಅಷ್ಟೇ ನಾಯಿಯ ಬಳಿ ಜಾಗ್ರತೆಯಿಂದಿರಬೇಕು.
* ನಿಮಗೆ ಪರಿಚಯವಿಲ್ಲದ ನಾಯಿಯ ಹತ್ತಿರ ಹೋಗಬೇಡಿ.
* ನಿಮ್ಮ ನಾಯಿಗೆ ತುಂಬಾ ನಿಯತ್ತು ಇದ್ದರೂ ಮಕ್ಕಳನ್ನು ನಾಯಿ ಬಳಿ ಆಡಲು ಬಿಟ್ಟು ನೀವು ನಿಮ್ಮ ಪಾಡಿಗೆ ಇರಬೇಡಿ.
* ನಾಯಿ ಬೊಗಳುತ್ತಾ ಬಂದಾಗ ಹೆದರುವುದು, ಓಡುವುದು ಮಾಡಬೇಡಿ, ನಿಧಾನಕ್ಕೆ ಚಲಿಸಿ, ಅದನ್ನು ದಿಟ್ಟಿಸುವುದು ಮಾಡಬೇಡಿ.





