HEALTH TIPS

ಚೀನಾ ಗಡಿ: ಚರ್ಚೆಗೆ ಆಗ್ರಹಿಸಿ ಸದನ ಬಹಿಷ್ಕರಿಸಿದ ವಿಪಕ್ಷಗಳು

 

                ನವದೆಹಲಿ: ಚೀನಾ ಜತೆಗಿನ ಗಡಿ ಸಮಸ್ಯೆ ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿ ಬುಧವಾರ  ವಿರೋಧಪಕ್ಷಗಳು ಲೋಕಸಭೆಯಿಂದ ಹೊರನಡೆದವು.

                   ಸದನದಲ್ಲಿ ಶೂನ್ಯವೇಳೆ ಆರಂಭವಾಗುತ್ತಿದ್ದಂತೆಯೇ ಒಟ್ಟುಗೂಡಿದ ಕಾಂಗ್ರೆಸ್ ಮತ್ತು ಡಿಎಂಕೆಯ ಸಂಸತ್ ಸದಸ್ಯರು ಸಭಾತ್ಯಾಗ ಮಾಡಿದರು.

ಬಳಿಕ ಟಿಎಂಸಿ, ಜೆಡಿಯು ಸಂಸದರು ಸಭಾತ್ಯಾಗ ಮಾಡಿ ಲೋಕಸಭೆಯಿಂದ ಹೊರನಡೆದರು.

                   ಸದನದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, 'ಸದನದಲ್ಲಿ ಭಾರತ- ಚೀನಾ ಗಡಿ ಸಮಸ್ಯೆ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಬೇಕು' ಎಂದು ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರಿಗೆ ಒತ್ತಾಯಿಸಿದರು.

                    'ಚೀನಾದ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುವಂತೆ ನಾವು ಬೆಳಿಗ್ಗೆಯಿಂದಲೂ ಒತ್ತಾಯಿಸುತ್ತಿದ್ದೇವೆ. ಸದನದಲ್ಲಿ ಚರ್ಚೆ ಮಾಡಲು ವಿರೋಧಪಕ್ಷಗಳಿಗೆ ಅವಕಾಶ ನೀಡಿ. ಇದು ಪ್ರತಿಪಕ್ಷಗಳ ಹಕ್ಕಾಗಿದೆ' ಎಂದೂ ಅವರು ಪ್ರತಿಪಾದಿಸಿದರು.

               ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಕೂಡಾ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಬಳಿಕ ಸದನದಲ್ಲಿ ಮಾದಕವಸ್ತುಗಳ ಹಾವಳಿ ಕುರಿತ ಚರ್ಚೆಯು ಮತ್ತೆ ಆರಂಭವಾಯಿತು.

              ಸೂಕ್ಷ್ಮವಿಚಾರ ಚರ್ಚಿಸುವುದು ಸರಿಯಲ್ಲ: 'ಗಡಿ ಸಮಸ್ಯೆಯು ಸೂಕ್ಷ್ಮವಾದ ವಿಚಾರವಾಗಿದ್ದು, ಅಂಥದ್ದನ್ನು ಸದನದಲ್ಲಿ ಚರ್ಚಿಸುವುದು ಸರಿಯಲ್ಲ. ಯುಪಿಎ ಸರ್ಕಾರದ ಅವಧಿಯಲ್ಲೂ ಇಂಥ ಚರ್ಚೆಗೆ ಅವಕಾಶ ನೀಡಿರಲಿಲ್ಲ' ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

                             ಗಂಭೀರ ವಿಚಾರಗಳ ಕುರಿತ ಮೌನ ಸರಿಯಲ್ಲ: ಸೋನಿಯಾ ವಾಗ್ದಾಳಿ

       ಭಾರತ- ಚೀನಾ ಗಡಿಯಂಥ ಗಂಭೀರ ವಿಚಾರಗಳ ಕುರಿತು ಚರ್ಚೆಗೆ ಅವಕಾಶ ನೀಡದೇ, ಮೌನ ವಹಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

               ಬುಧವಾರ ನಡೆದ ಕಾಂಗ್ರೆಸ್ ಸಂಸದೀಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 'ಗಡಿ ವಿಚಾರದಲ್ಲಿ ಸರ್ಕಾರ ಮೊಂಡುತನದಿಂದ ವರ್ತಿಸುತ್ತಿದೆ. ಚರ್ಚೆಗೆ ಅವಕಾಶ ನೀಡದಿರುವುದು ನಮ್ಮ ಪ್ರಜಾಪ್ರಭುತ್ವದ ಗೌರವಕ್ಕೆ ಧಕ್ಕೆ ತರುವಂಥದ್ದು ಮತ್ತು ಸರ್ಕಾರದ ಈ ಉದ್ದೇಶಪೂರ್ವಕವಾದ ನಡೆಯು ಭವಿಷ್ಯದಲ್ಲಿ ತೊಂದರೆಯುಂಟು ಮಾಡುವ ಬೆಳವಣಿಗೆಯಾಗಿದೆ' ಎಂದು ಟೀಕಿಸಿದರು.

                                     56 ಇಂಚಿನ ಎದೆ 0.56 ಇಂಚು ಆಗಿದೆ: ಎಎಪಿ ವ್ಯಂಗ್ಯ

                 ಚೀನಾ ಗಡಿಯ ಸಮಸ್ಯೆ ಕುರಿತು ಚರ್ಚೆ ಅವಕಾಶ ನೀಡದಿರುವುದನ್ನು ಟೀಕಿಸಿರುವ ಎಎಪಿ ಸಂಸದ ಸಂಜಯ್ ಸಿಂಗ್ ಅವರು, 'ಆಡಳಿತಾರೂಢ ಪಕ್ಷದ ನಾಯಕನ ಎದೆಯು ಪ್ರತಿಭಟನನಿರತ ರೈತರ ಮುಂದೆ 56 ಇಂಚು ಆಗುತ್ತದೆ, ಆದರೆ, ಅದೇ ಎದೆಯು ಚೀನಾದ ವಿಚಾರದಲ್ಲಿ 0.56 ಇಂಚು ಆಗಿದೆ' ಎಂದು ವ್ಯಂಗ್ಯವಾಡಿದ್ದಾರೆ.

                   ಸಂಸತ್ತಿನ ಸಂಕೀರ್ಣದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಎಎಪಿ, ಕಾಂಗ್ರೆಸ್, ಜೆಡಿಯು ಸೇರಿದಂತೆ ಇತರ ಪಕ್ಷಗಳು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್, 'ಗಡಿಯ ವಿಚಾರದ ಬಗ್ಗೆ ದೇಶದ ಜನತೆ ಹಾಗೂ ಸಂಸತ್ತಿಗೆ ಉತ್ತರ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಗಡಿ ರಕ್ಷಣೆಗಾಗಿ ನಮ್ಮ ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ. ಆದರೂ ಸರ್ಕಾರ ಚೀನಾದೊಂದಿಗಿನ ವ್ಯಾಪಾರವನ್ನು ಮತ್ತಷ್ಟು ಉತ್ತೇಜಿಸುತ್ತಿರುವುದು ಯಾಕೆ' ಎಂದು ಪ್ರಶ್ನಿಸಿದರು.

                               ತವಾಂಗ್: 23 ಹೊಸ ಮೊಬೈಲ್ ಟವರ್ ಸ್ಥಾಪನೆಗೆ ನಿರ್ಧಾರ

                 ಇಟಾನಗರ: 'ಅರುಣಾಚಲ ಪ್ರದೇಶದ ಎಲ್‌ಎಸಿ ಬಳಿ ಸಂಪರ್ಕವನ್ನು ಸುಧಾರಿಸಲು, ಹೆಚ್ಚಿನ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ' ಎಂದು ತವಾಂಗ್ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

               'ಗಡಿಭಾಗದಲ್ಲಿ ಸಂವಹಕ್ಕಾಗಿ ಸಂಪರ್ಕ ಸುಧಾರಿಸಲು ಬಿಎಸ್‌ಎನ್‌ಎಲ್ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳು 23 ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಿವೆ' ಎಂದು ತವಾಂಗ್‌ನ ಜಿಲ್ಲಾಧಿಕಾರಿ ಕೆ.ಎನ್. ದಾಮೋ ಅವರು ಮಾಹಿತಿ ನೀಡಿದ್ದಾರೆ.

                'ಈಗಿರುವ ಮೊಬೈಲ್ ಟವರ್‌ಗಳು ನಿರೀಕ್ಷಿತ ಮಟ್ಟದಲ್ಲಿ ಸೇವೆಗಳನ್ನು ಒದಗಿಸುತ್ತಿಲ್ಲ. ಇದರಿಂದಾಗಿ ರಕ್ಷಣಾ ಪಡೆಗಳು ಮಾತ್ರವಲ್ಲ, ಗಡಿ ಪ್ರದೇಶಗಳಲ್ಲಿರುವ ನಾಗರಿಕರಿಗೂ ತೊಂದರೆಯುಂಟಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.

              ಗಡಿಯಲ್ಲಿ ಡಿ. 9ರಂದು ನಡೆದ ಭಾರತ- ಚೀನಾ ಘರ್ಷಣೆಯ ಬಳಿಕ ಕೇಂದ್ರ ಸರ್ಕಾರವು ಹೊಸ ಟವರ್ ಸ್ಥಾಪನೆಗೆ ನಿರ್ಧರಿಸಿದೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries