HEALTH TIPS

ದೇಶದ 46 ಮಾನಸಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಶೋಚನೀಯ: ಎನ್‌ಎಚ್‌ಆರ್‌ಸಿ

 

             ನವದೆಹಲಿ: ದೇಶದಾದ್ಯಂತ ಸರ್ಕಾರ ನಡೆಸುತ್ತಿರುವ 46 ಮಾನಸಿಕ ಆರೋಗ್ಯ ಕೇಂದ್ರಗಳು ಶೋಚನೀಯ ಸ್ಥಿತಿಯಲ್ಲಿವೆ. ಅಲ್ಲಿ ಅಗತ್ಯಕ್ಕೆ ತಕ್ಕಷ್ಟು ವೈದ್ಯರಿಲ್ಲ ಮತ್ತು ಗುಣಮುಖರಾದ ರೋಗಿಗಳನ್ನು ಅಕ್ರಮವಾಗಿ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಹೇಳಿದೆ.

                 ಗ್ವಾಲಿಯರ್, ಆಗ್ರಾ ಮತ್ತು ರಾಂಚಿಯಲ್ಲಿನ ನಾಲ್ಕು ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರ/ ಆಸ್ಪತ್ರೆಗಳಿಗೆ ಎನ್‌ಎಚ್‌ಆರ್‌ಸಿ ಅಧಿಕಾರಿಗಳು ಭೇಟಿ ನೀಡಿದ್ದು, ಉಳಿದ 42 ಕೇಂದ್ರಗಳಿಂದ ವಿಶೇಷ ವರದಿಗಾರರಿಂದ ವರದಿ ತರಿಸಿಕೊಂಡ ನಂತರ ಈ ಮಾಹಿತಿಯನ್ನು ಹೊರಹಾಕಿದೆ.

                  'ಅಂತರರಾಷ್ಟ್ರೀಯ ಒಡಂಬಡಿಕೆಗಳು ಮತ್ತು ಮಾನಸಿಕ ಆರೋಗ್ಯ ಕಾಯ್ದೆ 2017ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ ಮತ್ತು ಗುಣಮುಖರಾದ ವ್ಯಕ್ತಿಗಳನ್ನು ಸಮಾಜ ಮತ್ತು ಕುಟುಂಬದೊಂದಿಗೆ ಮರುಸಂಘಟಿಸಲು ವಿಫಲವಾಗಿದೆ' ಎಂದು ಆಯೋಗ ಆರೋಪಿಸಿದೆ.

                  'ಮಾನಸಿಕ ಅಸ್ವಸ್ಥನಾದ ವ್ಯಕ್ತಿಯು ಯಾವುದೇ ಅಡೆತಡೆ ಇಲ್ಲದೇ ಸಮುದಾಯದ ಹಕ್ಕನ್ನು ಚಲಾಯಿಸಬಹುದು ಎಂಬುದನ್ನು ದೃಢಪಡಿಸಲು ಯಾವುದೇ ಸಂಸ್ಥೆಯು ಪರಿಣಾಮಕಾರಿಯಾಗಿ ಮತ್ತು ದೀರ್ಘಕಾಲಿನ ಕ್ರಮ ಕೈಗೊಂಡಿಲ್ಲ. ಒಬ್ಬ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡ ನಂತರವೂ ಅವರನ್ನು ಸಮಾಜದ ಜತೆ ಬದುಕುವ ಅಥವಾ ಕುಂಟುಂಬದೊಂದಿಗೆ ಮತ್ತೆ ಒಂದಾಗಲು ಅವಕಾಶ ನೀಡದೆ ಇರುವುದು ಹೆಚ್ಚು ಗಾಸಿ ಮಾಡುತ್ತಿದೆ. ಇದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಅಸಾಂವಿಧಾನಿಕವಾಗಿದೆ. ಭಾರತವು ಅಂಗೀಕರಿಸಿದ ಅಂಗವಿಕಲರ ಹಕ್ಕುಗಳಿಗೆ ಸಂಬಂಧಿಸಿದ ವಿವಿಧ ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಜವಾಬ್ದಾರಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ' ಎಂದು ಆಯೋಗ ಹೇಳಿದೆ.

                         ಮಾನಸಿಕ ಆರೋಗ್ಯ ಕಾಯ್ದೆಯಡಿ ಇದೆ ಬೆಂಬಲ:

               ಮಾನಸಿಕ ಅಸ್ವಸ್ಥರು ತಮ್ಮ ಕುಟುಂಬ ಅಥವಾ ಸಂಬಂಧಿಕರೊಂದಿಗೆ ವಾಸಿಸಲು ಸಾಧ್ಯವಾಗದಿದ್ದಲ್ಲಿ ಅಥವಾ ಮಾನಸಿಕ ಅಸ್ವಸ್ಥರನ್ನು ಅವರ ಕುಟುಂಬ ಮತ್ತು ಸಂಬಂಧಿಕರು ಕೈಬಿಟ್ಟರೆ, ಕಾನೂನು ನೆರವು ಸೇರಿದಂತೆ ಮತ್ತು ಕುಟುಂಬದವರೊಂದಿಗೆ ವಾಸಿಸುವ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಸರ್ಕಾರವು ಸೂಕ್ತ ಬೆಂಬಲವನ್ನು ನೀಡಬೇಕು ಎಂದು ಮಾನಸಿಕ ಆರೋಗ್ಯ ಕಾಯ್ದೆಯಲ್ಲಿ ಹೇಳಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.

                       ವರದಿ ಕೇಳಿರುವ ಎನ್‌ಎಚ್‌ಆರ್‌ಸಿ:

              ಈ ಭೇಟಿಯ ನಂತರ, ಕೇಂದ್ರ ಆರೋಗ್ಯ ಕಾರ್ಯದರ್ಶಿ, ಆರೋಗ್ಯ ಸೇವೆಗಳ ಮಹಾನಿರ್ದೇಶಕರು, ರಾಜ್ಯಗಳ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ (ಆರೋಗ್ಯ), ಪೊಲೀಸ್ ಮಹಾನಿರ್ದೇಶಕರು, ಎಲ್ಲ ರಾಜ್ಯ ಮತ್ತು ಕೇಂದ್ರಾಳಿತ ಪ್ರದೇಶಗಳ ಮಹಾನಗರಗಳ ಪೊಲೀಸ್‌ ಕಮಿಷನರ್‌ ಮತ್ತು ನಿರ್ದೇಶಕರಿಂದ ಎನ್‌ಎಚ್‌ಆರ್‌ಸಿ ವರದಿ ಕೇಳಿದ್ದು, ಎಲ್ಲ 46 ಕೇಂದ್ರಗಳಲ್ಲಿ ಗುಣಮುಖರಾದ ರೋಗಿಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಹೇಗೆ ಅಕ್ರಮವಾಗಿ ಆಸ್ಪತ್ರೆಗಳಲ್ಲಿ ಇರಿಸಲಾಗುತ್ತಿದೆ ಎಂಬುದಕ್ಕೆ ಅವರು ಕಾರಣಗಳನ್ನು ನೀಡಬೇಕಿದೆ.

                   ಹೆಚ್ಚಿನ ರಾಜ್ಯಗಳು ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಮತ್ತು ರಾಜ್ಯ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿಯನ್ನು ರಚಿಸಿಲ್ಲ ಮತ್ತು ರಾಜ್ಯ ಸರ್ಕಾರದ ಮಾನಸಿಕ ಆರೋಗ್ಯ ರಕ್ಷಣಾ ನಿಯಮ ಮತ್ತು ರಾಜ್ಯ ಮಾನಸಿಕ ಆರೋಗ್ಯ ರಕ್ಷಣಾ ನಿಯಮಾವಳಿಗಳನ್ನು ರೂಪಿಸಿಲ್ಲ ಎಂದು ಹೇಳಿರುವ ಆಯೋಗ, ಅದರ ಸ್ಥಿತಿ ಕುರಿತು ವರದಿ ಕೇಳಿದೆ. ಮಾನಸಿಕ ಆಸ್ಪತ್ರೆಗಳು ಮತ್ತು ಸಂಸ್ಥೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಮಾಡಲು ಮತ್ತು ಸರಿಯಾದ ನೈರ್ಮಲ್ಯ ಸೇರಿದಂತೆ ವಾಸ್ತವ್ಯಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಸರ್ಕಾರ ಸಲ್ಲಿಸಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries