ತಿರುವನಂತಪುರಂ: ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಿನ್ನೆ ಮುಕ್ತಾಯಗೊಂಡಿತು. ಬೇಸಿಗೆ ರಜೆಗೆ ಕಾಲಿಟ್ಟಿರುವ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಖುಷಿಯ ನಡುವೆಯೂ ಹಲವು ವರ್ಷಗಳಿಂದ ಜೊತೆಯಲ್ಲಿ ಓದಿದ ಗೆಳೆಯರನ್ನು ಅಗಲಿ ಬೇಸರಗೊಂಡಿದ್ದಾರೆ.
ಇಂದು ಹೈಯರ್ ಸೆಕೆಂಡರಿ ಪರೀಕ್ಷೆಗಳೂ ಕೊನೆಗೊಳ್ಳಲಿದೆ.
ಈ ವರ್ಷ 4,19,554 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿದ್ದರು. ಮೌಲ್ಯಮಾಪನವು ಏಪ್ರಿಲ್ 3 ರಂದು ಪ್ರಾರಂಭವಾಗಿ ಏಪ್ರಿಲ್ 26 ರಂದು ಕೊನೆಗೊಳ್ಳುತ್ತದೆ. ರಾಜ್ಯದ 70 ಶಿಬಿರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಸುಮಾರು 18,000 ಶಿಕ್ಷಕರು ಮೌಲ್ಯಮಾಪನದ ಭಾಗವಾಗಲಿದ್ದಾರೆ.
ಪಠ್ಯೇತರ ವಿಷಯಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಈ ವರ್ಷ ಗ್ರೇಸ್ ಮಾರ್ಕ್ ನೀಡಲಾಗುವುದು ಎಂದು ಶಿಕ್ಷಣ ಸಚಿವರು ಈ ಹಿಂದೆ ಘೋಷಿಸಿದ್ದರು. ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಸೂಚಿಸಲಾಗಿದೆ.





