HEALTH TIPS

ಯುದ್ಧಕೈದಿಗಳ ವಿಷಯದಲ್ಲಿ ರಶ್ಯ ಮತ್ತು ಉಕ್ರೇನ್ ಸಮಾನ ಆರೋಪಿಗಳು: ವಿಶ್ವಸಂಸ್ಥೆ ವರದಿ

                  ವಿಶ್ವಸಂಸ್ಥೆ,: ರಶ್ಯ ಮತ್ತು ಉಕ್ರೇನ್ ನ ಸೇನೆಯು ಯುದ್ಧಕೈದಿಗಳ ವಿಚಾರಣೆಯಿಲ್ಲದೆ ಮರಣದಂಡನೆ ಶಿಕ್ಷೆ ವಿಧಿಸುವ ಪ್ರಕರಣದಲ್ಲಿ ಸಮಾನ ಆರೋಪಿಗಳಾಗಿರುವುದು ತೀವ್ರ ಕಳವಳಕಾರಿಯಾಗಿದೆ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.

                ರಶ್ಯ ಸೇನೆ ಸೆರೆಹಿಡಿದ ತನ್ನ ಯೋಧ `ಉಕ್ರೇನ್ ಗೆ ಶುಭವಾಗಲಿ' ಎಂದು ಹೇಳಿದ ಕಾರಣಕ್ಕೆ ಆತನನ್ನು ಅತೀ ಸನಿಹದಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮೇಲ್ವಿಚಾರಣಾ ನಿಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಉಕ್ರೇನ್ ಗೆ ಸಂಬಂಧಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ನಿಯೋಗದ ಮುಖ್ಯಸ್ಥೆ ಮೆಟಿಲ್ಡಾ ಬಾಗ್ನರ್ `ಎರಡೂ ದೇಶಗಳು ಯುದ್ಧಕೈದಿಗಳ ನ್ಯಾಯೋಚಿತ ವಿಚಾರಣೆ ನಡೆಸದೆ ಹತ್ಯೆ ಮಾಡಿರುವುದಕ್ಕೆ ದಾಖಲೆಯಿದೆ ಎಂದರು.

                  ಉಕ್ರೇನ್ ಸೇನೆ ಸುಮಾರು 25 ರಶ್ಯನ್ ಯುದ್ಧಕೈದಿಗಳ ವಿಚಾರಣೆಯಿಲ್ಲದೆ ಹತ್ಯೆ ನಡೆಸಿರುವುದಕ್ಕೆ ನಮ್ಮಲ್ಲಿ ದಾಖಲೆಯಿದ್ದು ಇದು ಅತ್ಯಂತ ಕಳವಳಕಾರಿಯಾಗಿದೆ. ಯುದ್ಧರಂಗದಲ್ಲಿ ಎದುರಾಳಿ ಪಡೆಯ ಯೋಧರನ್ನು ಸೆರೆ ಹಿಡಿದೊಡನೆ ಅವರನ್ನು ಹತ್ಯೆ ಮಾಡುವ ಪ್ರಕರಣ ಆಗಾಗ ವರದಿಯಾಗುತ್ತಿದೆ. 22 ಯೋಧರ ಹತ್ಯೆ ಪ್ರಕರಣದ ಬಗ್ಗೆ ಉಕ್ರೇನ್ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆಯ ಬಗ್ಗೆ ನಮಗೆ ತಿಳಿದಿದ್ದರೂ, ಯಾವುದೇ ಕಾನೂನು ಕ್ರಮಗಳ ಬಗ್ಗೆ ಮಾಹಿತಿಯಿಲ್ಲ. ರಶ್ಯದ ಸಶಸ್ತ್ರ ಪಡೆ ಸೆರೆಹಿಡಿದ 15 ಉಕ್ರೇನಿಯನ್ ಯುದ್ಧಕೈದಿಗಳಿಗೆ ಮರಣದಂಡನೆ ವಿಧಿಸಿರುವ ವರದಿಯೂ ಲಭಿಸಿದೆ. ಇದರಲ್ಲಿ 11 ಹತ್ಯೆಯನ್ನು ರಶ್ಯದ ಪರ ಹೋರಾಟ ನಡೆಸುತ್ತಿರುವ ವಿದೇಶಿ ಸಿಪಾಯಿಗಳ ಪಡೆ `ವಾಗ್ನರ್ ಮರ್ಸಿನರಿ ಗ್ರೂಪ್' ನಡೆಸಿರುವುದಕ್ಕೆ ಪುರಾವೆ ದೊರಕಿದೆ ಎಂದು ಬಾಗ್ನರ್ ಹೇಳಿದ್ದಾರೆ.

               ಉಕ್ರೇನ್ ನ ಮಿಲಿಟರಿ ಸಿಬಂದಿಗಳು ರಶ್ಯನ್ ಯುದ್ಧಕೈದಿಗಳಿಗೆ ಮರಣದಂಡನೆ, ಅಣಕು ಮರಣದಂಡನೆ ಅಥವಾ ಲೈಂಗಿಕ ಹಿಂಸೆಯ ಬೆದರಿಕೆ ಒಡ್ಡುತ್ತಿದ್ದಾರೆ. ಪ್ರತೀಕಾರ ಕ್ರಮವಾಗಿ ಯುದ್ಧಕೈದಿಗಳನ್ನು ಥಳಿಸಲಾಗುತ್ತಿದೆ. `ಈ ಹೊಡೆತ ನೀವು ಬುಚಾ ನಗರದ ಮೇಲೆ ಕಣ್ಣುಹಾಕಿರುವುದಕ್ಕೆ' ಎಂದು ಅಣಕಿಸುತ್ತಾ ಥಳಿಸಲಾಗುತ್ತಿದೆ. ಕೈದಿಗಳು ನೀಡುವ ಉತ್ತರದಿಂದ ಸಮಾಧಾನ ಆಗದಿದ್ದರೆ ವಿದ್ಯುತ್ಶಾಕ್ ನೀಡಲಾಗುತ್ತದೆ ಎಂದು ಶುಕ್ರವಾರ ಬಿಡುಗಡೆಗೊಂಡಿರುವ ವಿಶ್ವಸಂಸ್ಥೆಯ ವರದಿ ಹೇಳಿದೆ.

                ಇದೇ ವರದಿಯ ಇನ್ನೊಂದು ವಿಭಾಗದಲ್ಲಿ ರಶ್ಯನ್ ಸೇನೆಯಿಂದ ಚಿತ್ರಹಿಂಸೆಗೆ ಗುರಿಯಾದ ಉಕ್ರೇನಿಯನ್ ಯುದ್ಧಕೈದಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಲೈಂಗಿಕ ಕಿರುಕುಳ, ಚಿತ್ರಹಿಂಸೆ, ಅನ್ನ, ನೀರು ನೀಡದೆ ಸತಾಯಿಸುವುದು, ಅಸ್ವಸ್ಥಗೊಂಡರೆ ವೈದ್ಯಕೀಯ ಚಿಕಿತ್ಸೆ ನಿರಾಕರಣೆ ಇತ್ಯಾದಿ ಆರೋಪ ಕೇಳಿಬಂದಿದೆ. ವಿಚಾರಣೆ ನೆಪದಲ್ಲಿ ಯುದ್ಧಕೈದಿಗಳನ್ನು ಸಲಿಕೆಯಿಂದ ಹೊಡೆಯುವುದು, ಇರಿಯುವುದು, ವಿದ್ಯುತ್ ಆಘಾತ ನೀಡುವ ಬಗ್ಗೆ ಕೈದಿಗಳು ಮಾಹಿತಿ ನೀಡಿದ್ದಾರೆ. ಈ ಚಿತ್ರಹಿಂಸೆಯಿಂದಾಗಿ ಹಲವರ ಹಲ್ಲು , ಬೆರಳುಗಳು, ಪಕ್ಕೆಲುಬು, ಮೂಗಿನ ನರ ಮುರಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

              ಈ ಮಧ್ಯೆ, ವಿಶ್ವಸಂಸ್ಥೆಯ ವರದಿಯಲ್ಲಿ ಉಕ್ರೇನಿಯನ್ ಪಡೆಯ ವಿರುದ್ಧ ಆರೋಪ ಕೇಳಿಬಂದಿರುವುದರಿಂದ ಆಶ್ಚರ್ಯವಾಗಿದೆ. ಈ ವರದಿ ಯಾವ ದಾಖಲೆ ಅಥವಾ ಮಾಹಿತಿಯನ್ನು ಆಧರಿಸಿದೆ ಎಂಬುದನ್ನು ತಿಳಿಯಬೇಕಿದೆ ಎಂದು ಉಕ್ರೇನ್ ಸಂಸತ್ತಿನ ಮಾನವ ಹಕ್ಕುಗಳ ಆಯುಕ್ತ ಡಿಮಿಟ್ರೊ ಲ್ಯುಬಿನೆಟ್ಸ್ ಪ್ರತಿಕ್ರಿಯಿಸಿದ್ದಾರೆ. ಉಕ್ರೇನ್ನಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮೇಲ್ವಿಚಾರಣೆ ನಿಯೋಗ ನಡೆಸಿರುವ ಕಾರ್ಯಗಳಿಗೆ ಅಭಿನಂದನೆಗಳು. ಆದರೆ ವಿಶ್ವಸಂಸ್ಥೆ ನಿಯೋಗ ಬಲಿಪಶುಗಳು ಹಾಗೂ ಆಕ್ರಮಣಕಾರರನ್ನು ಸಮಾನ ತಕ್ಕಡಿಯಲ್ಲಿ ತೂಗುವ ಸಾಧ್ಯತೆಯನ್ನು ತಪ್ಪಿಸಲಿದೆ ಎಂದು ನಿರೀಕ್ಷಿಸುವುದಾಗಿ ಉಕ್ರೇನ್ನ ವಿದೇಶಾಂಗ ಇಲಾಖೆ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries