HEALTH TIPS

ಅಶ್ಲೀಲತೆಯನ್ನು ಅಸ್ತ್ರವಾಗಿಸಿಕೊಂಡ ವರ್ಚ್ಯುವಲ್‌ ಗುಮ್ಮನಿಗೆ ಬೆಚ್ಚದಿರಿ!

 

           ಆಧುನಿಕ ಬದುಕಿಗೆ ಬೆಸೆದುಕೊಂಡಿರುವ ವರ್ಚುವಲ್ ಜಗತ್ತಿನಲ್ಲಿ ಏನಿಲ್ಲ, ಎಲ್ಲವೂ ಉಂಟು. ಮನಸ್ಸಿನಾಳದಲ್ಲಿ ತಲ್ಲಣದ ತರಂಗವೇಳಿಸಲು ಅಶ್ಲೀಲ ಮೆಸೇಜ್‌ ಒಂದು ನೆಪ. ಭಯವನ್ನೇ ಬಿತ್ತುವ ಕೈಗಳು ಕೆಲವೊಮ್ಮೆ ಕಾನೂನಿನ ಕೋಳಕ್ಕೆ ಸಿಗದೇ ಹೋಗಬಹುದು. ಅವು ಬಿತ್ತುವ ಭಯ ಮನಸ್ಸಿನಾಳಕ್ಕೆ ಇಳಿಯುವ ಮುನ್ನ ಮದ್ದು ಅರೆಯಿರಿ.

              ಪ್ರಕರಣ 1: ಒಂದು ಮಟ ಮಟ ಮಧ್ಯಾಹ್ನ ಯಾವುದೋ ಅಪರಿಚಿತ ನಂಬರ್‌ನಿಂದ ಯಾರದ್ದೋ ಪಾನ್ ಕಾರ್ಡ್‌ ಫೋಟೋವನ್ನು ಅಶ್ಲೀಲ ಚಿತ್ರಗಳಿಗೆ ಮಾರ್ಫ್‌ ಮಾಡಿ ಹರಿಬಿಟ್ಟ ಸಂದೇಶ. ಇದನ್ನು ನೋಡುತ್ತಿದ್ದಂತೆ ಗೃಹಿಣಿ ಕ್ಷಮಾಳ ಮುಖದಲ್ಲಿ ಗಾಬರಿ, ಆತಂಕ. ಕೂಡಲೇ ಆ ಮೆಸೇಜ್‌ ಅನ್ನು ಡಿಲೀಟ್ ಮಾಡಿ, ನಂಬರ್‌ ಅನ್ನು ಬ್ಲಾಕ್‌ಗೆ ಹಾಕಿದಳು. ಆದರೆ, ಒಂದು ವಾರವಾದರೂ ಅವಳ ಮನಸ್ಸಿನಲ್ಲಿ ಹುದುಗಿದ್ದ ಭಯ ಕಡಿಮೆಯಾಗಲೇ ಇಲ್ಲ. ಪದೇ ಪದೇ ಎಲ್ಲದರ ಪಾಸ್‌ವರ್ಡ್‌ ಬದಲಾಯಿಸಿದಳು. ಆದರೂ ತನ್ನ ಮೊಬೈಲ್‌ನಿಂದ ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಭಯ. ಯಾರಾದಾರೂ ಆಗಂತುಕರು ಈ ಪೋಟೊವನ್ನು ಕದ್ದು ಬೇರೆ ಯಾವುದಕ್ಕಾದರೂ ಮಾರ್ಫ್‌ ಮಾಡಿಬಿಟ್ಟರೆ? ಮತ್ತೆ ಮತ್ತೆ ಆಪ್ತರಲ್ಲಿ ಇದಕ್ಕೆ ಪರಿಹಾರ ಕೇಳಿದಳು. ಗೂಗಲ್‌ನಲ್ಲಿರುವ ಅಷ್ಟೂ ಮಾಹಿತಿಯನ್ನು ಬಗೆದು ನೋಡಿದಳು. ಏನು ಮಾಡಿದರೂ ಒಳಗೆ ಅಡಗಿದ್ದ ಭಯ ಮಾತ್ರ ಹೋಗದು...

               ಪ್ರಕರಣ 2: ದ್ವಿತೀಯ ಪಿಯು ಓದುತ್ತಿರುವ ಸ್ನೇಹಾ ಮನೆಯಿಂದ ದೂರವಿದ್ದು, ಹಾಸ್ಟೆಲ್‌ನಲ್ಲಿದ್ದುಕೊಂಡು ಕಲಿಯುತ್ತಿದ್ದಾಳೆ. ಈಚೀಚೆಗೆ ಅವಳು ಮನೆಯಲ್ಲಿದ್ದರೂ ಎರಡೆರಡು ಬಾರಿ ಬಾತ್‌ರೂಂ ಕೀಲಿ ಸರಿಯಾಗಿ ಹಾಕಿಕೊಂಡಿದ್ದೇನೆಯೇ? ಎಂಬ ಪ್ರಶ್ನೆ ಕೇಳಿಕೊಳ್ಳುತ್ತಾಳೆ. ಬಾತ್‌ರೂಂನ ಕಿಟಕಿಗಳೆಲ್ಲವೂ ಸರಿಯಾಗಿ ಮುಚ್ಚಿವೆಯೇ? ಯಾವುದಾದರೂ ಕಿಂಡಿ ಉಳಿದು, ಅಲ್ಲಿಂದ ಯಾರಾದರೂ ವಿಡಿಯೊ ಮಾಡಿಬಿಟ್ಟರೆ? ಎಂಬ ಆತಂಕ ಅವಳದ್ದು. ತಾನೊಬ್ಬಳೇ, ಖಾಸಗಿಯಾಗಿರುವಾಗ ತನ್ನ ಫೋನ್‌ ಕ್ಯಾಮೆರಾ ಆನ್‌ ಆಗಿಲ್ಲವೆಂಬುದನ್ನು ಮತ್ತೊಮ್ಮೆ ಖಾತ್ರಿಪಡಿಸಿಕೊಳ್ಳುತ್ತಾಳೆ.

                 ಪ್ರಕರಣ 3: ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ಸೌಮ್ಯಾ ವರ್ಕ್‌ ಫ್ರಂ ಹೋಂ ಇರುವಂಥ ಕೆಲಸಕ್ಕಾಗಿಯೇ ಅರ್ಜಿ ಹಾಕಿದಳು. ಸಂದರ್ಶನ ಜಿಲ್ಲಾ ಕಚೇರಿಯಲ್ಲಿಯೇ ನಡೆಯಿತು. ಸಂದರ್ಶನ ತೆಗೆದುಕೊಂಡ ಕಂಪನಿಯ ಪೂರ್ವಾಪರ ವಿಚಾರಿಸಿದರೆ ಅದೊಂದು ನಕಲಿ ಕಂಪನಿ ಯೆಂಬುದು ಖಾತ್ರಿಯಾಗಿತ್ತು. ಇದರ ಸಹವಾಸವೇ ಬೇಡ ವೆಂದು ಸುಮ್ಮನಾಗಿದ್ದಳು. ಒಂದು ಬೆಳಗಿನ ಜಾವ ಇದ್ದಕ್ಕಿದ್ದ ಹಾಗೆ ಕರೆಯೊಂದು ಬಂದಿತ್ತು. ರಿಸೀವ್ ಮಾಡಿದರೆ ಅದೇ ನಕಲಿ ಕಂಪನಿಯ ನೇಮಕಾತಿ ವಿಭಾಗದ ಮುಖ್ಯಸ್ಥನ ಅಶ್ಲೀಲ ಮಾತುಗಳು!

            ಈ ಮೂರು ಪ್ರಕರಣಗಳಲ್ಲಿ ಅಡಗಿರುವ ಅಂಶವೊಂದೆ ಭಯ. ಅಶ್ಲೀಲತೆಯನ್ನು ಅಸ್ತ್ರವಾಗಿ ಬಳಸಿಕೊಂಡು ಭಯ ಬಿತ್ತುವ ಕೆಲಸ ಈಗಿನದ್ದೇನಲ್ಲ. ಆದರೆ, ಅದರ ಸ್ವರೂಪ ಮಾತ್ರ ಹೊಸತು. ಧೈರ್ಯವಾಗಿರುವ ಹೆಣ್ಣುಮಕ್ಕಳ ಮುಂದೆ ಅಶ್ಲೀಲ ಪದಪುಂಜ ಪ್ರಯೋಗಿಸಿಬಿಟ್ಟರೆ ಅವರು ಅಲ್ಲಿಂದ ದೂರ ಸರಿದಾರೂ ಎನ್ನುವ ತಂತ್ರ ಮೊದಲಿನಿಂದಲೂ ಪ್ರಯೋಗಿಸುತ್ತಲೇ ಬರಲಾಗಿದೆ. ಈಗೀಗ ಈ ಜಾಗವನ್ನು ಅಶ್ಲೀಲ ವಿಡಿಯೊ, ಅಶ್ಲೀಲ ಬೈಗುಳ ತುಂಬಿದ ಮೆಸೇಜ್‌, ಮಾರ್ಫ್‌ ವಿಡಿಯೊಗಳು ಆಕ್ರಮಿಸಿಕೊಂಡಿವೆ. ಇವು ವರ್ಚ್ಯುವಲ್ ಲೋಕದ ಗುಮ್ಮನಂತೆ ಆಕಾರ ಪಡೆದುಕೊಂಡು ಅವ್ಯಕ್ತ ಭಯವನ್ನು ಸೃಷ್ಟಿಸಿವೆ.

            ಇಂಥ ಭಯದ ಕರಿನೆರಳು ಎಂಥವರನ್ನೂ ಬೆಂಬಿಡದೇ ಕಾಡುತ್ತದೆ. ಅದರಲ್ಲಿಯೂ ಸೂಕ್ಷ್ಮ ಮನಸ್ಸಿನವರಾದರೆ ಇಂಥ ಭಯದಿಂದ ಹೊರಬರಲು ಬಹಳ ಸಮಯವೇ ಬೇಕಾಗಬಹುದು. ಅದು ಇನ್ನಿತರ ಮಾನಸಿಕ ಕ್ಲೇಶವನ್ನು ಉಂಟು ಮಾಡಬಹುದು. ಅವರ ಮನೋಜಗತ್ತನ್ನು ಈ ಭಯದ ಗುಮ್ಮವೇ ಆಳಬಹುದು.

                      ಅವ್ಯಕ್ತ ಭಯ ವ್ಯಕ್ತಿತ್ವಕ್ಕೆ ಮಾರಕ

         ವರ್ಚ್ಯುವಲ್ ಲೋಕದಲ್ಲಿ ಕಾಣುವ ಈ ಗುಮ್ಮ ಒಮ್ಮೆ ಅನುಭವಕ್ಕೆ ಬಂದರೆ ಅದರ ತೆಕ್ಕೆಯಿಂದ ಅಷ್ಟು ಸುಲಭ ವಾಗಿ ಬಿಡಿಸಿಕೊಳ್ಳಲಾಗದು. ಅವ್ಯಕ್ತ ಭಯ ಆತಂಕದ ಮನಸ್ಥಿತಿಯನ್ನು(ಆಕ್ಸೈಂಟಿ) ರೂಪಿಸುತ್ತದೆ. ಈ ಮನಸ್ಥಿತಿಗೆ ಕೇಳುವ ಕಿವಿಗಳು ಇಲ್ಲದೇ ಹೋದರೆ ಅದು ಗೀಳಾಗಿ, ಕ್ರಮೇಣ ಖಿನ್ನತೆಯಾಗಿ ಪರಿವರ್ತನೆಗೊಳ್ಳುತ್ತದೆ.

                ಆದ ಕೆಟ್ಟ ಅನುಭವವೇ ಪದೇ ಪದೇ ಆಗಬಹುದು ಎಂದು ಮನಸ್ಸು ಅಂದಾಜಿಸುತ್ತದೆ. ಇದರಿಂದ ಯಾವುದೇ ವಿಚಾರವನ್ನು ಪದೇ ಪದೇ ಪರಿಶೀಲಿಸುವ ಗೀಳು ಹೆಚ್ಚುತ್ತದೆ. ಉದಾಹರಣೆಗೆ ಪದೇ ಪದೇ ಪಾಸ್‌ವರ್ಡ್ ಬದಲಾಯಿಸುವ, ಕ್ಯಾಮೆರಾ ಆನ್ ಆಗಿದೆಯೇ ಎಂದು ಪರಿಶೀಲಿಸುವ ಸ್ಥಿತಿ. ಈ ಗೀಳು ಬೇರೆ ಯಾವ ಕೆಲಸವನ್ನು ಮಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಮನಸ್ಸನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಒಂದು ಸಣ್ಣ ಆತಂಕದ ಎಳೆ ಗೀಳಾಗಿ ಬದುಕಿನ ಯಾವ ಖುಷಿಯ ಕ್ಷಣವನ್ನು ಅನು ಭವಿಸಲು ಸಾಧ್ಯವಾಗದಂತೆ ಮಾಡಿಬಿಡುತ್ತದೆ. ಯಾರಲ್ಲೂ ನಂಬಿಕೆಯನ್ನು ಉಳಿಸಿಕೊಳ್ಳಲಾಗದ, ನಂಬಿಕೆಯ ಮೇಲೆಯೇ ನಂಬಿಕೆ ಕಳೆದುಕೊಂಡ ಸ್ಥಿತಿ ಉಂಟಾಗುತ್ತದೆ. ಇದರಿಂದ ವ್ಯಕ್ತಿತ್ವದ ಬೆಳವಣಿಗೆಯಾಗುವುದಿಲ್ಲ. ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿಯೂ ಈ ಪ್ರವೃತ್ತಿಯ ಜನರು ಪ್ರಗತಿ ಕಾಣದೇ ಖಿನ್ನತೆಗೆ ಜಾರುತ್ತಾರೆ. ನಡವಳಿಕೆಯಲ್ಲಿ ಒಂದು ಬಗೆಯ ಚಂಚಲತೆ ಉಂಟಾಗಬಹುದು.

ಪರಿಹಾರವೇನು ?

'ಯಾವುದೇ ಭಯವಿರಲಿ, ಅದು ಕ್ರಮೇಣ ಅಭ್ಯಾಸವಾಗಿ ಬಿಟ್ಟರೆ ಬದುಕು ದುಸ್ತರವಾಗುತ್ತದೆ. ಆತಂಕ ಎಂಬುದು ಬದುಕನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ ಹಾಗಾಗಿ ಇಂಥ ಭಯ ಎದುರಾದಾಗ ಕೂಡಲೇ ಮನಸ್ಸಿಗೆ ಹತ್ತಿರ ವಿರುವವರೊಂದಿಗೆ ಮನ ಬಿಚ್ಚಿ ಮಾತನಾಡಿ ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಅರ್ಪಿತಾ ಮಿರ್ಚಾಂದನಿ.

ಯಾರಾದರೂ ಇಂಥ ಅಶ್ಲೀಲವೆನಿಸುವ ಸಂದೇಶ ಕಳುಹಿಸಿದರೆ ಮೊದಲಿಗೆ ಅತ್ಯಾಪ್ತರ ಹತ್ತಿರ ಹೇಳಿಕೊಳ್ಳಿ. ಕಾನೂನು ಕ್ರಮ ತೆಗೆದುಕೊಳ್ಳುವುದು ಎಲ್ಲ ಎರಡನೆಯ ಹಂತ. ಮೊದಲಿಗೆ ಇಂಥ ಸಂದರ್ಭದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಆಗಿರುವ ಘಟನೆಯಿಂದ ಮನಸ್ಸಿಗೆ ಗಾಸಿಯಾಗಿದ್ದರೂ ಅದನ್ನು ಅಲ್ಲಿಂದ ಹೊರ ತರುವುದು ಹೇಗೆ ಎಂಬುದರ ಕಡೆ ಗಮನ ಕೊಡಿ. ಯೋಚನಾ ಧಾಟಿಯಲ್ಲಿ ಆಗುತ್ತಿರುವ ಬದಲಾವಣೆ ಯನ್ನು ಸೂಕ್ಷ್ಮವಾಗಿ ಗಮನಿಸಿ. ಸ್ವಪರೀಕ್ಷೆ ಎನ್ನುವುದು ಅತ್ಯಗತ್ಯ. ಆ ನಂತರವಷ್ಟೆ ಸೂಕ್ತ ತಜ್ಞರನ್ನು ಭೇಟಿ ಮಾಡಿ, ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂಬುದು ಅವರ ಸಲಹೆ.

ಜಾಗ್ರತೆ ವಹಿಸಬೇಕಾದ ಸಂಗತಿ

l ಇಂಟರ್‌ನೆಟ್‌, ಸಾಮಾಜಿಕ ಮಾಧ್ಯಮ ಅದರ ಬಳಕೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ಪ್ರತಿ ನಡೆಯನ್ನು ಎಚ್ಚರದಿಂದ ಇಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ.

l ಸ್ನೇಹ, ಸಂಬಂಧ ಎಷ್ಟೇ ಗಾಢವಾಗಿರಲಿ. ಚೌಕಟ್ಟನ್ನು ಹಾಕಿಕೊಳ್ಳಿ. ಖಾಸಗಿ ಕ್ಷಣವನ್ನು ವಿಡಿಯೊವಾಗದಂತೆ ಎಚ್ಚರ ವಹಿಸಿ.

l ಯಾವುದೇ ವೈಯಕ್ತಿಕ ಮಾಹಿತಿ ಕೇಳುವ ಮೆಸೇಜ್‌ಗಳಿಗೆ ಸ್ಪಂದಿಸದಿರಿ. ಮನಸ್ಸಿಗೆ ಹಿತವಲ್ಲ ಎನಿಸುವ ಸಂಗತಿಗೆ ಆಸ್ಪದ ಕೊಡಬೇಡಿ.

l ವೈಯಕ್ತಿಕ ಮಾಹಿತಿಯನ್ನು ಕದಿಯುವ ವೆಬ್‌ಸೈಟ್‌ಗಳ ಬಗ್ಗೆ ಜಾಗ್ರತೆ ಇರಲಿ.

ಪೋಷಕರು/ ಸಂಗಾತಿಗಳು ಏನು ಮಾಡಬಹುದು?

l ಏನೋ ತಪ್ಪು ಮಾಡಿರಬೇಕು, ಅದಕ್ಕೆ ಈ ರೀತಿಯಾಗಿದೆ ಎಂಬ ಧೋರಣೆ ಬಿಟ್ಟುಬಿಡಿ. ಒಂದೊಮ್ಮೆ ತಪ್ಪು ಮಾಡಿದ್ದರೂ ಅದನ್ನು ಸಹಜವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಿ

l ಎಂಥ ಪರಿಸ್ಥಿತಿಯನ್ನು ಹೇಳಿಕೊಳ್ಳುವ ಮುಕ್ತ ವಾತಾವರಣ ಮತ್ತು ನಂಬುಗೆಯ ಸಂಬಂಧವಿರುವಂತೆ ನೋಡಿಕೊಳ್ಳಿ.

l ಹದಿಹರೆಯದ ಮಕ್ಕಳು ತಂತ್ರಜ್ಞಾನ ಬಳಸುವಾಗ ಅದರಲ್ಲಿನ ಲೋಪದೋಷಗಳು, ತೊಂದರೆಗಳ ಬಗ್ಗೆಯೂ ನಿಧಾನವಾಗಿ ಆಗಾಗ್ಗೆ ಹೇಳುತ್ತಿರಿ.

l ತಂತ್ರಜ್ಞಾನದ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು, ಅರಿವು ಮೂಡಿಸುವ ಕೆಲಸ ಮಾಡಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries