ನವದೆಹಲಿ: ಮೊಸಳೆಯೊಂದಿಗೆ ಹೋರಾಡಿ ತಮ್ಮನನ್ನು ಕಾಪಾಡಿದ ಬಾಲಕನ ಶೌರ್ಯಕ್ಕೆ ಮೆಚ್ಚಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ.
ಎರಡು ವರ್ಷಗಳ ಹಿಂದೆ ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಚೌಮುಖ ಗ್ರಾಮದ ನೀರಜ್ ಮತ್ತು ಆತನ ಸಹೋದರ ಧೀರಜ್ ತಮ್ಮ ಎಮ್ಮೆಗಳನ್ನು ತೊಳೆಯಲು ಗಂಡಕ್ ನದಿಗೆ ತೆರಳಿದ್ದರು.
ಸ್ವಲ್ಪ ದೂರದಲ್ಲಿ ಇಬ್ಬರೂ ಬೇರೆ ಬೇರೆ ಎಮ್ಮೆಗಳನ್ನು ತೊಳೆಯುತ್ತಿದ್ದರು. ಈ ವೇಳೆ ಮೊಸಳೆಯೊಂದು ದಾಳಿ ಮಾಡಿತ್ತು. ಧೀರಜ್ ಹಿಂದು- ಮುಂದು ಯೋಚಿಸದೇ ನೀರಿಗೆ ಹಾರಿ ಮೊಸಳೆಯೊಂದಿಗೆ ಹೊರಾಡಿ ತನ್ನ ಸಹೋದರ ಪ್ರಾಣವನ್ನು ಕಾಪಾಡಿದ್ದನು. ಈ ವೇಳೆ ಸಹೋದರರಿಬ್ಬರು ಗಂಭೀರವಾಗಿ ಗಾಯ ಗೊಂಡಿದ್ದರು. ನಂತರ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.
ತನ್ನ ಸಾಹಸದಿಂದ ತಮ್ಮನನ್ನು ಕಾಪಾಡಿದ ಧೀರಜ್ ಪ್ರಯತ್ನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೌರವಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯೋಗಪಟ್ಟಿ ಬ್ಲಾಕ್‌ನ ಚೌಮುಖ ಗ್ರಾಮದ 16 ವರ್ಷದ ಧೀರಜ್‌ಗೆ ಪಾಟ್ನಾದ ಗಾಂಧಿ ಮೈದಾನದಲ್ಲಿ ಸನ್ಮಾನ ಮಾಡಿ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಬಾಲ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಆತನ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್, ಮೊಬೈಲ್, ಬ್ಯಾಗ್ ಮತ್ತು ಸ್ಮಾರ್ಟ್ ವಾಚ್ ಕೂಡ ನೀಡಲಾಗಿದೆ.





