ಲಿಸ್ಟೆಡ್ ಕಂಪನಿಗಳು ಪಿಎಂ ಕೇರ್ಸ್ ನಿಧಿಗೆ ಸಲ್ಲಿಸಿರುವ ದೇಣಿಗೆಗಳಲ್ಲಿ ಸಿಂಹಪಾಲು ಸರಕಾರಿ ಸಂಸ್ಥೆಗಳದ್ದಾಗಿದೆ. ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದಿಂದ ಸಂಗ್ರಹಿತ ಅಂಕಿಅಂಶಗಳಂತೆ ಲಿಸ್ಟೆಡ್ ಸರಕಾರಿ ಸಂಸ್ಥೆಗಳು 2019-20 ಮತ್ತು 2021-22ರ ನಡುವೆ ಪಿಎಂ ಕೇರ್ಸ್ ನಿಧಿಗೆ ಕನಿಷ್ಠ 2,913.6 ಕೋ.ರೂ.ಗಳ ದೇಣಿಗೆಯನ್ನು ಸಲ್ಲಿಸಿವೆ ಎಂದು business-standard.com ವರದಿ ಮಾಡಿದೆ.
ಈ ಕುರಿತು ವಿಶ್ಲೇಷಣೆ ನಡೆಸಿರುವ business-standard 57 ಲಿಸ್ಟೆಡ್ ಸರಕಾರಿ ಸಂಸ್ಥೆಗಳನ್ನು ಗುರುತಿಸಿದ್ದು, ಇವುಗಳ ಪಾಲು ಇತರ ಲಿಸ್ಟೆಡ್ ಕಂಪನಿಗಳು ಪಿಎಂ ಕೇರ್ಸ್ ನಿಧಿಗೆ ನೀಡಿರುವ ಒಟ್ಟು ದೇಣಿಗೆಗಿಂತ ಹೆಚ್ಚಿದೆ. ಒಟ್ಟು ದೇಣಿಗೆ 4,910.5 ಕೋಟಿ ರೂ.ಗಳಾಗಿದ್ದು,ಈ ಪೈಕಿ ಲಿಸ್ಟೆಡ್ ಸರಕಾರಿ ಕಂಪನಿಗಳ ಪಾಲು ಶೇ.59.3ರಷ್ಟಿದೆ.
ಲಿಸ್ಟೆಡ್ ಸರಕಾರಿ ಕಂಪನಿಗಳಲ್ಲಿ ಒಎನ್ಜಿಸಿ 370 ಕೋಟಿ ರೂ., ಎನ್ಟಿಪಿಸಿ 330 ಕೋ.ರೂ.,ಪಿಜಿಸಿಐ 275 ಕೋ.ರೂ.,ಐಒಸಿ 265 ಕೋ.ರೂ. ಮತ್ತು ಪಿಎಫ್ಸಿ 222.4 ಕೋ.ರೂ.ಗಳೊಂದಿಗೆ ಅಗ್ರ ಸ್ಥಾನಗಳಲ್ಲಿವೆ.
ಪಿಎಂ ಕೇರ್ಸ್ ಫಂಡ್ ಮಾರ್ಚ್ 2020ರಲ್ಲಿ ಸ್ಥಾಪನೆಗೊಂಡಾಗಿನಿಂದಲೂ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದೆ.
ಪ್ರಧಾನಿಯವರು ನಿಧಿಯ ಅಧ್ಯಕ್ಷರಾಗಿದ್ದು,ರಕ್ಷಣಾ,ಗೃಹ ಮತ್ತು ವಿತ್ತ ಸಚಿವರು ಟ್ರಸ್ಟಿಗಳಲ್ಲಿ ಸೇರಿದ್ದಾರೆ. ಕೇಂದ್ರವು ಜನವರಿ 2023ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಂತೆ ನಿಧಿಯ ಮೇಲೆ ಭಾರತ ಸರಕಾರವು ನಿಯಂತ್ರಣವನ್ನು ಹೊಂದಿಲ್ಲ. ಪಿಎಂ ಕೇರ್ಸ್ ಸರಕಾರದಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ ಎಂದು ಹೇಳಿದ್ದ ಸರ್ವೋಚ್ಚ ನ್ಯಾಯಾಲಯದ 2020ರ ತೀರ್ಪಿನಲ್ಲಿಯ ನಿಲುವನ್ನು ಇದು ಪುನರುಚ್ಚರಿಸುತ್ತಿದೆ.
ಹೊಸ ನಿಯಮಗಳ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್)ಯಡಿ ಕಂಪನಿಗಳ ವೆಚ್ಚಗಳ ಪರಿಶೀಲನೆಯು ಮಹತ್ವವನ್ನು ಪಡೆದುಕೊಳ್ಳುತ್ತದೆ. ಸಿಎಸ್‌ಆರ್ ವೆಚ್ಚಗಳ ಕುರಿತು ಕಂಪನಿಗಳು ತಮ್ಮ ವಾರ್ಷಿಕ ವರದಿಗಳಲ್ಲಿ ತೋರಿಸಬೇಕಾದ ಮಾಹಿತಿಗೆ ಮಿತಿ ಹೇರಲು ಸರಕಾರವು ಸೆಪ್ಟಂಬರ್ 2022ರಲ್ಲಿ ನಿಯಮಗಳಿಗೆ ತಿದ್ದುಪಡಿಯನ್ನು ತಂದಿತ್ತು.
ಪ್ರೈಮ್ ಡಾಟಾ ಬೇಸ್ ನ ಆಡಳಿತ ನಿರ್ದೇಶಕ ಪ್ರಣವ ಹಲ್ದಿಯಾ ಹೇಳುವಂತೆ ಸಿಎಸ್‌ಆರ್ ನಿಯಮಗಳಿಗೆ ಇತ್ತೀಚಿನ ತಿದ್ದುಪಡಿಗಳು ಕಡಿಮೆ ಪಾರದರ್ಶಕತೆಗೆ ಅವಕಾಶವನ್ನು ನೀಡುತ್ತವೆ. ಕಂಪನಿಗಳು ಈಗ ಯಾವ ಬಾಬತ್ತಿಗಾಗಿ ಸಿಎಸ್‌ಆರ್ ವೆಚ್ಚವನ್ನು ಮಾಡಲಾಗಿದೆ ಎಂಬ ಕುರಿತು ಹೆಚ್ಚಿನ ಮಾಹಿತಿಗಳನ್ನು ತಮ್ಮ ಶೇರುದಾರರಿಗೆ ಒದಗಿಸಬೇಕಿಲ್ಲ. ಹೆಚ್ಚಿನ ಬಹಿರಂಗಪಡಿಸುವಿಕೆಯು ದೇಣಿಗೆಗಳನ್ನು ನೀಡುವ ಕಂಪನಿಗಳಿಗೆ ಮತ್ತು ದೊಡ್ಡ ದೇಣಿಗೆಗಳನ್ನು ಸ್ವೀಕರಿಸುವವರಿಗೆ ಧನಾತ್ಮಕವಾಗಿರುತ್ತದೆ.
ಪಿಎಂ ಕೇರ್ಸ್ ನಿಧಿಯು ಕಂಪನಿಗಳಲ್ಲದೆ ವ್ಯಕ್ತಿಗಳು ಮತ್ತು ಇತರ ಸಂಸ್ಥೆಗಳಿಂದಲೂ ದೇಣಿಗೆಗಳನ್ನು ಸ್ವೀಕರಿಸುತ್ತದೆ.
ಪಿಎಂ ಕೇರ್ಸ್ ನಿಧಿಯ ವೆಬ್ಸೈಟ್ ನಲ್ಲಿ ಬಹಿರಂಗಗೊಳಿಸಿರುವಂತೆ ಅದು 2019-20ರಲ್ಲಿ 3,076.6 ಕೋಟಿ ರೂ.ಗಳನ್ನು ಸ್ವೀಕರಿಸಿತ್ತು. ಇದು 2020-21ರಲ್ಲಿ 10,990.2 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. 2021-22ರಲ್ಲಿ ನಿಧಿಯು 9,131.9 ಕೋಟಿ ರೂ.ಗಳನ್ನು ಸ್ವೀಕರಿಸಿತ್ತು. ನಿಧಿಯ ಮೊದಲ ವರ್ಷದಲ್ಲಿ ದೇಣಿಗೆಗಳ ಹೆಚ್ಚಿನ ಪಾಲು ಕಾರ್ಪೊರೇಟ್ ಇಂಡಿಯಾದ ಸಿಎಸ್‌ಆರ್ ಬಜೆಟ್ ಗಳಿಂದ ಬಂದಿರುವಂತಿದೆ.
2019-20ರಲ್ಲಿ ಪಿಎಂ ಕೇರ್ಸ್ ನಿಧಿಗೆ ಒಟ್ಟು ಸಿಎಸ್‌ಆರ್ ದೇಣಿಗೆ 1,577.8 ಕೋಟಿ ರೂ. ಅಥವಾ ಆ ವರ್ಷದಲ್ಲಿಯ ಸ್ವೀಕೃತಿಗಳ ಅರ್ಧಕ್ಕೂ ಹೆಚ್ಚಿನಷ್ಟಿತ್ತು. ಎನ್‌ಎಸ್‌ಇ ಲಿಸ್ಟೆಡ್ ಕಂಪನಿಗಳಿಂದ ಒಟ್ಟು ಸಿಎಸ್‌ಆರ್ ದೇಣಿಗೆಗಳು 2020-21ರಲ್ಲಿ 2,471.6 ಕೋ.ರೂ.ಗಳಿಗೆ ಏರಿಕೆಯಾಗಿದ್ದರೆ 2021-22ರಲ್ಲಿ ಅದು 861.1 ಕೋ.ರೂ.ಗಳಷ್ಟಿತ್ತು.
ಪಿಎಂ ಕೇರ್ಸ್ ನಿಧಿಯು 2019-20ರಲ್ಲಿ ಕಾರ್ಯಾರಂಭಗೊಂಡಾಗ ಕೆಲವು ದಿನಗಳಲ್ಲಿ ಸೀಮಿತ ಮೊತ್ತ (2,049 ಕೋ.ರೂ.)ವನ್ನು ವ್ಯಯಿಸಿತ್ತು. ಇದು 2020-21ರಲ್ಲಿ 3,976.2 ಕೋ.ರೂ. ಮತ್ತು 2021-22ರಲ್ಲಿ 3,716.3 ಕೋ.ರೂ.ಗಳಿಗೆ ಏರಿಕೆಯಾಗಿತ್ತು.





