ಕಾಸರಗೋಡು: ಜಿಲ್ಲೆಗೆ ಸೂಪರ್ ಸ್ಪೆಶ್ಯಾಲಿಟಿ ಆಸ್ಪತ್ರೆಯ ಸೇವೆ ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದು ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ವದಿಯಲ್ಲಿ ತಿಳಿಸಿದೆ. ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಈ ವದಿಯನ್ನು ಸುಪ್ರೀಂ ಕೋರ್ಟು ಪರಿಶೀಲಿಸಿರುವುದಾಗಿ ಪ್ರಾದಿಕಾರ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಯೇಟಿವ್ ಥೆರಪಿ ಇತ್ಯಾದಿ ಸವಲತ್ತುಗಳನ್ನು ಖಾತ್ರಿಪಡಿಸಲು ಸೆಂಟ್ರಲೈಸ್ಡ್ ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆಯನ್ನು ಕಾಸರಗೋಡಿನಲ್ಲಿ ತುರ್ತಾಗಿ ಆರಂಭಿಸುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ಜಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಇದನ್ನು ನಾಗರಿಕರ ಸೇವೆಗೆ ಬಿಟ್ಟುಕೊಡಬೇಕು, ಕಾಸರಗೋಡು ಜನರಲ್ ಆಸ್ಪತ್ರೆ ಅಥವಾ ಹೊಸದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿಮಲ್ಟಿ ಸ್ಪೆಶ್ಯಾಲಿಟಿ ಚಿಕಿತ್ಸಾ ಸೌಲಭ್ಯ ಏರ್ಪಡಿಸಬೇಕು ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಸುಪ್ರೀಂ ಕೋರ್ಟು ನೀಡಿರುವ ನಿರ್ದೇಶ ಪ್ರಕಾರ ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲೆಯ ಆರೋಗ್ಯ ವಲಯದಲ್ಲಿನ ಚಿಕಿತ್ಸಾ ಸೌಕರ್ಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಇದರ ವರದಿಯನ್ನು ಸುಪ್ರೀಂ ಕೋರ್ಟಿನ ಪರಿಶೀಲನೆಗಾಗಿ ಸಲ್ಲಿಸಿದೆ. ಕೋವಿಡ್ ಕಾಲಘಟ್ಟದಲ್ಲಿ ಚಟ್ಟಂಚಾಲಿನಲ್ಲಿ ಟಾಟಾ ಸಂಸ್ಥೆ ಮಂಜೂರುಗೊಳಿಸಿರುವ ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯವಿಲ್ಲದ ಕಾರಣ, ಆಸ್ಪತ್ರೆಯ ಬಗ್ಗೆ ಜಿಲ್ಲೆಯ ಜನತೆ ಇರಿಸಿಕೊಂಡಿದ್ದ ಭರವಸೆ ಸುಳ್ಳಾಗಿದೆ. ಕೇರಳವನ್ನು ನಡುಗಿಸಿರುವ ಎಂಡೋಸಲ್ಫಾನ್ ದುರಂತ ನಡೆದ ಕಾಸರಗೋಡು ಜಿಲ್ಲೆಯಲ್ಲಿ ಸಾವಿರಾರು ಮಂದಿ ಎಂಡೋಸಲ್ಪಾಣ್ ದುಷ್ಪರಿಣಾಮಪೀಡಿತರಿದ್ದು, ಇವರೆಲ್ಲರೂ ಉನ್ನತ ಚಿಕಿತ್ಸೆಗಾಗಿ ಇತರ ಜಿಲ್ಲೆ ಅಥವ ರಾಜ್ಯವನ್ನು ಆಶ್ರಯಿಸಬೇಕಾಗಿದೆ. ಇವರಿಗೆ ಉನ್ನತಮಟ್ಟದ ಚಿಕಿತ್ಸೆ ಲಭ್ಯವಾಗಬೇಕಾದರೆ ಸೂಪರ್‍ಸ್ಪೆಶ್ಯಾಲಿಟಿ ಆಸ್ಪತ್ರೆಯ ತುರ್ತು ಅಗತ್ಯವಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.




.jpeg)
