ಮುಂಬೈ: ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೊನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಆದಿಪುರುಷ್ ಬಿಡುಗಡೆಯಾದ ದಿನದಿಂದಲ್ಲೇ ಒಂದಿಲ್ಲೊಂದು ವಿವಾದಗಳಿಂದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ.
ಈ ಮಧ್ಯೆ ಚಿತ್ರದ ನಿರ್ದೇಶಕ ಓಂ ರಾವತ್ ಖಾಸಗಿ ಸುದ್ದಿ ಸಂಸ್ಥೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುವ ವೇಳೆ ರಾಮಾಯಣವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಳ್ಳುವವರು ಮೂರ್ಖರು ಎಂದು ಹೇಳುವ ಮೂಲಕ ಹೊಸ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಆದಿಪುರುಷ್ ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕಲೆಕ್ಷನ್ ವಿಚಾರಕ್ಕೆ ಬಂದರೆ ಬಿಡುಗಡೆಯಾದ ಎರಡು ದಿನಗಳಲ್ಲಿ 200 ಕೋಟಿ ರೂಪಾಯಿಗೂ ಅಧಿಕ ಸಂಪಾದಿಸಿದೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ಓಂ ರಾವತ್ ಸಂತಸ ವ್ಯಕ್ತಪಡಿಸಿದ್ಧಾರೆ.
ಚಿತ್ರದಲ್ಲಿ ಮಾಡಲಾಗಿರುವ ಬದಲಾವಣೆಗಳ ಕುರಿತು ಪ್ರತಿಕ್ರಿಯಿಸಿ ರಾಮಾಯಣ ಮಹಾಕಾವ್ಯವು ವಿಶಾಲವಾದ ಮತ್ತು ವಿಸ್ತಾರವಾದ ಕಥೆ. ಆದಿಪುರುಷ್ ಚಿತ್ರದಲ್ಲಿ ಅದರ ಒಂದು ಸಣ್ಣ ಭಾಗವನ್ನು ತೋರಿಸಲಾಗಿದೆ. ಸಂಪೂರ್ಣವಾಗಿ ರಾಮಾಯಣವನ್ನು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರೆ, ಅದು ತಪ್ಪಾಗುತ್ತದೆ.ಯಾರಿಂದಲೂ ಸಾಧ್ಯವಿಲ್ಲ
ನಾನು ರಾಮಾಯಣವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದು ಕುಳಿತುಕೊಂಡು ನಿಮಗೆ ಹೇಳಿದ್ದರೆ, ಅದು ದೊಡ್ಡ ಎಡವಟ್ಟಾಗುತ್ತದೆ. ಏಕೆಂದರೆ ರಾಮಾಯಣ ಎಂಬ ಮಹಾಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಅರ್ಥ ಮಾಡಿಕೊಂಡ ಕಥೆಯನ್ನು ಸೆಲ್ಯೂಲಾಯ್ಡ್ನಲ್ಲಿ ಚಿತ್ರೀಕರಿಸಲು ಪ್ರಯತ್ನಿಸಿದ್ದೇನೆ.
ನಾನು ದೂರದರ್ಶನದಲ್ಲಿ ನೋಡುತ್ತ ಬೆಳೆದ ರಾಮಾಯಣದ ಅವತರಣಿಕೆ ದೊಡ್ಡದಾದ ಕಥೆಯೊಂದನ್ನು ಹೇಳುತ್ತದೆ. ಅದಾಗ್ಯೂ, ಆದಿಪುರುಷ್ ಚಿತ್ರವು ನಿರ್ದಿಷ್ಟವಾಗಿ ಯುದ್ಧಕಾಂಡದಂತಹ ಸನ್ನಿವೇಶಗಳ ಮೇಲೆ ಹೆಚ್ಚು ಗಮನ ಹರಿಸುತ್ತದೆ. ರಾಮಾಯಣ ಎಷ್ಟು ದೊಡ್ಡದಾಗಿದೆ ಎಂದು ಅದನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.
ಒಂದು ವೇಳೆ ಯಾರಾದರೂ ರಾಮಾಯಣವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರೆ. ಅವರಂತಹ ಮೂರ್ಖ ಇನ್ನೊಬ್ಬ ಇಲ್ಲ ಅಥವಾ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಆದಿಪುರುಷ್ ಚಿತ್ರದ ನಿರ್ದೇಶಕ ಓಂ ರಾವತ್ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ.





