ಇಂಫಾಲ: ಗಲಭೆ ಪೀಡಿತ ಮಣಿಪುರದ ಕೊಂಗ್ಬಾದಲ್ಲಿರುವ ಕೇಂದ್ರ ಸಚಿವ ಆರ್.ಕೆ. ರಂಜನ್ ಸಿಂಗ್ ಅವರ ಮನೆಗೆ ಕಿಡಿಗೇಡಿಗಳು ಗುರುವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ.
ರಾತ್ರಿ 11ರ ಸುಮಾರಿಗೆ ಸಾವಿರಕ್ಕೂ ಹೆಚ್ಚು ಜನರ ಗುಂಪು ಸಿಂಗ್ ನಿವಾಸದ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದೆ.
ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವರಾಗಿರುವ ರಂಜನ್ ಸಿಂಗ್ ಅವರ ನಿವಾಸಕ್ಕೆ ಭಾರಿ ಹಾನಿಯಾಗಿದೆ. ಘಟನೆ ಸಂದರ್ಭದಲ್ಲಿ ಸಿಂಗ್ ಹಾಗೂ ಅವರ ಕುಟುಂಬ ಮಣಿಪುರದಲ್ಲಿ ಇರಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಂಜನ್ ಸಿಂಗ್, 'ಸರ್ಕಾರಿ ಕೆಲಸದ ವಿಚಾರವಾಗಿ ನಾನೀಗ ಕೇರಳದಲ್ಲಿದ್ದೇನೆ. ಅದೃಷ್ಟವಶಾತ್ ನನ್ನ ಮನೆಯಲ್ಲಿ ಕಳೆದ ರಾತ್ರಿ ಯಾರೊಬ್ಬರೂ ಗಾಯಗೊಂಡಿಲ್ಲ. ಕಿಡಿಗೇಡಿಗಳು ಪೆಟ್ರೋಲ್ ಬಾಂಬ್‌ಗಳೊಂದಿಗೆ ಬಂದಿದ್ದರು. ನನ್ನ ಮನೆಯ ನೆಲಮಹಡಿ ಮತ್ತು ಮೊದಲ ಮಹಡಿಗೆ ಹಾನಿಯಾಗಿದೆ. ಇದು ನೋವಿನ ಸಂಗತಿ. ಈಗಲೂ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ಈ ರೀತಿಯ ಕೃತ್ಯದಲ್ಲಿ ಭಾಗಿಯಾಗುವುದು ಸಂಪೂರ್ಣ ಅಮಾನವೀಯವಾದದ್ದು' ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಒಂದು ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಸೇನೆ ಮತ್ತು ಅರೆ ಪಡೆಗಳನ್ನು ನಿಯೋಜಿಸಲಾಗಿದೆ. ಆದಾಗ್ಯೂ, ಪೂರ್ವ ಇಂಫಾಲದ ಖಾಮೆಲಾಕ್ ಗ್ರಾಮದ ಮೇಲೆ ಶಂಕಿತ ಉಗ್ರರು ಮಂಗಳವಾರ (ಜೂನ್ 13) ರಾತ್ರಿ ದಾಳಿ ನಡೆಸಿದ್ದರು. ಘಟನೆಯಲ್ಲಿ 9 ಮಂದಿ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದರ ಬೆನ್ನಲ್ಲೇ, ಕುಕಿ ಸಮುದಾಯದ ನಾಯಕಿಯಾಗಿರುವ ನೆಮ್ಚಾ ಕಿಪ್‌ಗೆನ್ ಅವರ ಅಧಿಕೃತ ನಿವಾಸಕ್ಕೆ ಬುಧವಾರ (ಜೂನ್ 14) ರಾತ್ರಿ ಅಪರಿಚಿತರು ಬೆಂಕಿ ಹಚ್ಚಿದ್ದರು. ಗುರುವಾರವೂ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.





