ಬದಿಯಡ್ಕ: ಗಡಿ ಗ್ರಾಮ ಎಣ್ಮಕಜೆ ಹಾಗೂ ಕುಂಬ್ಡಾಜೆ ಪಂಚಾಯಿತಿ ಸಂದಿಸುವ ಏತಡ್ಕ ಸನಿಹದ ಪೆರಿಯಾಲ್ ಜಿಂತಡ್ಕ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಈ ಪ್ರದೇಶದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಡ್ರೆ ಕುಕ್ಕುನಡಿ ನಿವಾಸಿ ವಿಷ್ಣುಪ್ರಸಾದ್ ಗುರುವಾರ ರಾತ್ರಿ ತಮ್ಮ ಕುಟುಂಬದವರೊಂದಿಗೆ ಕಾರಿನಲ್ಲಿ ಈ ಹಾದಿಯಾಗಿ ಸಂಚರಿಸುತ್ತಿರುವ ಮಧ್ಯೆ ಪೆರಿಯಾಲ್‍ನಲ್ಲಿ ತೋಟಗಾರಿಕಾ ನಿಗಮದ ಗೇರು ತೋಟದಿಂದ ಕೆಳಭಾಗಕ್ಕೆ ಚಿರತೆ ಇಳಿದು ಬರುತ್ತಿರುವುದನ್ನು ಕಂಡಿದ್ದಾರೆ. ನಿಧಾನವಾಗಿ ಇಳಿದು ಕೆಳಭಾಗಕ್ಕೆ ಸಂಚರಿಸಿರುವ ಚಿರತೆ ನಂತರ ಕತ್ತಲಲ್ಲ ಮರೆಯಾಗಿರುವುದಾಗಿ ವಿಷ್ಣುಪ್ರಸಾದ್ ತಿಳಿಸಿದ್ದಾರೆ.
ಈ ಪ್ರದೇಶದ ಒಂದು ಮನೆಯಿಂದ ಸಾಕುನಾಯಿಯೂ ಕಾಣೆಯಾಗಿರುವುದು ಮತ್ತಷ್ಟು ಭೀತಿಗೆ ಕಾರಣವಾಗಿದೆ. ಪೆರ್ಲ-ಸ್ವರ್ಗ ರಸ್ತೆಯ ಗಾಳಿಗೋಪುರದಿಂದ ಏತಡ್ಕ ಸಂಚರಿಸುವ ಈ ಹಾದಿ ಪೆರಿಯಾಲ್, ಜಿಂತಡ್ಕ ಪ್ರದೇಶದಲ್ಲಿ ದುರ್ಗಮವಾಗಿದ್ದು, ಚಿರತೆ ಕಾಣಿಸಿಕೊಂಡಿರುವುದರಿಂದ ಇಲ್ಲಿ ವಾಸಿಸುತ್ತಿರುವವರಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. ಮಾಹಿತಿ ಪಡೆದು ವಾಣೀನಗರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ. ಚಿರತೆ ಸಂಚರಿಸಿದ ಹಾದಿಯಲ್ಲಿ ಪಂಜದ ಗುರುತು ಪತ್ತೆಗೆ ಅಧಿಕಾರಿಗಳು ಪ್ರಯತ್ನಿಸಿದರೂ, ಬಿರುಸಿನ ಮಳೆಗೆ ಪತ್ತೆಸಾಧ್ಯವಾಗಿರಲಿಲ್ಲ. ಈ ಹಾದಿಯಾಗಿ ಬೈಕಲ್ಲಿ ಸಂಚರಿಸುವವರು ಹಾಗೂ ಮನೆಯವರು ಜಾಗ್ರತೆ ಪಾಲಿಸುವಂತೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಚಿತ್ರ: ಸಾಂದರ್ಭಿಕ


