ಸಿಂಗಾಪುರ: ಭಾರತೀಯ ಮೂಲದ ಸಿಂಗಾಪುರದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ಗುರುವಾರ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
ನಿನ್ನೆ 154 ವರ್ಷಗಳ ಹಳೆಯ ಅರಮನೆಯಾದ ಇಸ್ತಾನಾದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಮೂಲದ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಅವರು 9ನೇ ಅಧ್ಯಕ್ಷರಾಗಿ ಆಯ್ಕೆಯಾದ ಥರ್ಮನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಇಸ್ತಾನಾ ಸಿಂಗಾಪುರದ ಅಧ್ಯಕ್ಷರ ಅಧಿಕೃತ ನಿವಾಸವಾಗಿದೆ. 66 ವರ್ಷದ ಥರ್ಮನ್ ಅವರು ಆರು ವರ್ಷಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
ಸಮಾರಂಭದಲ್ಲಿ ಪ್ರಧಾನಿ ಲೀ ಸೈನ್ ಲೂಂಗ್, ಸಂಪುಟ ಸದಸ್ಯರು, ಸಂಸದರು, ಉನ್ನತ ಅಧಿಕಾರಿಗಳು ಮತ್ತು ರಾಜತಾಂತ್ರಿಕ ಸದಸ್ಯರು ಉಪಸ್ಥಿತರಿದ್ದರು.
ಕಳೆದ ಶುಕ್ರವಾರ ನಡೆದ ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಷಣ್ಮುಗರತ್ನಂ ಅವರು, ಚೀನಾ ಮೂಲದ ಇಬ್ಬರು ಪ್ರತಿಸ್ಪರ್ಧಿಗಳನ್ನು ಸೋಲಿಸಿ, ಸಿಂಗಾಪುರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.