ನವದೆಹಲಿ: ಭಾರತೀಯ ಸೇನೆಯ ಆಹ್ವಾನದ ಮೇರೆಗೆ ಸ್ಥಳೀಯ ಮಾಧ್ಯಮಗಳ ಪಕ್ಷಪಾತ ಮತ್ತು ಏಕಪಕ್ಷೀಯ ವರದಿಗಾರಿಕೆ ಪರಿಶೀಲಿಸಲು ಪತ್ರಕರ್ತರ ತಂಡವನ್ನು ಮಣಿಪುರಕ್ಕೆ ಕಳುಹಿಸಲಾಗಿದೆ ಎಂಬ ಭಾರತೀಯ ಸಂಪಾದಕರ ಕೂಟದ (ಇಜಿಐ) ಹೇಳಿಕೆಗೆ ಸುಪ್ರೀಂ ಕೋರ್ಟ್ ಸೋಮವಾರ ಆಶ್ಚರ್ಯ ವ್ಯಕ್ತಪಡಿಸಿದೆ.
'ನಾವು ಸ್ವಯಂಪ್ರೇರಿತರಾಗಿ ಅಲ್ಲಿಗೆ ಹೋಗಿಲ್ಲ. ಸೇನೆಯ ಮನವಿ ಮೇರೆಗೆ ಅಲ್ಲಿಗೆ ತೆರಳಬೇಕಾಯಿತು. ಇದು ಅತ್ಯಂತ ಗಂಭೀರ ವಿಷಯ' ಎಂದು ಇಜಿಐ ಸದಸ್ಯರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಮನೋಜ್ ಮಿಶ್ರಾ ಅವರ ನ್ಯಾಯಪೀಠಕ್ಕೆ ತಿಳಿಸಿದರು.
ಭಾರತೀಯ ಸೇನೆಯು 2023ರ ಜುಲೈ 12 ರಂದು ಭಾರತೀಯ ಸಂಪಾದಕರ ಕೂಟಕ್ಕೆ ಕಳುಹಿಸಿದ ಪತ್ರವನ್ನು ಸಿಬಲ್ ಉಲ್ಲೇಖಿಸಿದ್ದಾರೆ.
'ಮಣಿಪುರದ ಘಟನೆಗಳನ್ನು ಸ್ಥಳೀಯ ಮಾಧ್ಯಮಗಳು ಏಕಪಕ್ಷೀಯವಾಗಿ ವರದಿಗಾರಿಕೆ ಮಾಡುತ್ತಿವೆ ಎಂಬ ಕಾರಣಕ್ಕೆ ಸೇನೆಯ ಆಹ್ವಾನದ ಮೇರೆಗೆ ಪತ್ರಕರ್ತರ ತಂಡಗಳು ಮಣಿಪುರಕ್ಕೆ ಹೋಗಿವೆ' ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಮಣಿಪುರಕ್ಕೆ ಬರುವಂತೆ ಇಜಿಐಗೆ ಸೇನೆ ಏಕೆ ಹೇಳುತ್ತದೆ?' ಎಂದು ಪ್ರಶ್ನಿಸಿತು.
ಕಣಿವೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ವಸ್ತುಸ್ಥಿತಿ ತಿಳಿದುಕೊಳ್ಳುವ ಅಗತ್ಯವಿತ್ತು ಎಂದು ವಕೀಲರು ತಿಳಿಸಿದರು.
'ಮಣಿಪುರದ ವಕೀಲರು ಹಿಂದೆ ಸರಿಯುತ್ತಿರುವುದರಿಂದ ಹಾಗೂ ಈ ಸಮಯದಲ್ಲಿ ನಾವು ಅಲ್ಲಿಗೆ ಹೋಗುವುದು ಅಪಾಯಕಾರಿ' ಎಂದು ಅವರು ದೆಹಲಿ ಹೈಕೋರ್ಟ್‌ನಲ್ಲಿ ಈ ವಿಷಯ ಮುಂದುವರಿಸಲು ಅವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು.
ಮಣಿಪುರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಜಿಐ ಸದಸ್ಯರಿಗೆ ಇನ್ನೂ ಸ್ವಲ್ಪ ಸಮಯದವರೆಗೆ ಬಲವಂತದ ಕ್ರಮ ತೆಗೆದುಕೊಳ್ಳದಂತೆ ರಕ್ಷಣೆ ನೀಡಬಹುದು ಮತ್ತು ಇತರ ಪ್ರಕರಣಗಳಂತೆ ಈ ವಿಷಯವನ್ನು ಮಣಿಪುರ ಹೈಕೋರ್ಟ್ ತೆಗೆದುಕೊಳ್ಳಬಹುದು ಎಂದು ಹೇಳಿದರು.
ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಶುಕ್ರವಾರಕ್ಕೆ ನಿಗದಿಪಡಿಸಿದೆ.
ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಜಿಐ ಪ್ರಕಟಿಸಿರುವ ಸತ್ಯಶೋಧನಾ ವರದಿಯು ಪ್ರಚೋದನಕಾರಿಯಾಗಿದೆ ಎಂಬ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ದೂರಿನ ಮೇರೆಗೆ ಒಕ್ಕೂಟದ ಅಧ್ಯಕ್ಷೆ ಸೀಮಾ ಮುಸ್ತಾಫ, ಸದಸ್ಯರಾದ ಸೀಮಾ ಗುಹಾ, ಭರತ್ ಭೂಷಣ್ ಹಾಗೂ ಸಂಜಯ್ ಕಪೂರ್ ವಿರುದ್ಧ ಸೆ.4ರಂದು ಪೊಲೀಸರು ಎಫ್‌ಐಆರ್ ದಾಖಲಿಸಿದರು.