ಟೋಕಿಯೊ: ಜಪಾನ್‍ನಲ್ಲಿ ವೈರಲ್ ಸೋಂಕು ಕಳೆದ 10 ವರ್ಷಗಳಲ್ಲೇ ಅತೀ ವೇಗವಾಗಿ ಉಲ್ಬಣಗೊಂಡಿದ್ದು ಅಪಾಯದ ಮಟ್ಟವನ್ನು ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳನ್ನು ಉಲ್ಲೇಖಿಸಿ `ಜಪಾನ್ ಟೈಮ್ಸ್' ವರದಿ ಮಾಡಿದೆ.
0
samarasasudhi
ಡಿಸೆಂಬರ್ 18, 2023
ಟೋಕಿಯೊ: ಜಪಾನ್‍ನಲ್ಲಿ ವೈರಲ್ ಸೋಂಕು ಕಳೆದ 10 ವರ್ಷಗಳಲ್ಲೇ ಅತೀ ವೇಗವಾಗಿ ಉಲ್ಬಣಗೊಂಡಿದ್ದು ಅಪಾಯದ ಮಟ್ಟವನ್ನು ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳನ್ನು ಉಲ್ಲೇಖಿಸಿ `ಜಪಾನ್ ಟೈಮ್ಸ್' ವರದಿ ಮಾಡಿದೆ.
ಕೊರೋನ ಸಾಂಕ್ರಾಮಿಕದ ವಿರುದ್ಧ ಜಾರಿಗೆ ತಂದ ಸೋಂಕು ನಿಯಂತ್ರಣ ಕ್ರಮಗಳ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಕರಣಗಳು ಕಡಿಮೆಯಾದ ನಂತರ ಫ್ಲೂ ಪ್ರಕರಣ ಹೆಚ್ಚಿರುವುದು ಜನತೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಸೂಚನೆಯಾಗಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಡಿಸೆಂಬರ್ 10ರ ವೇಳೆಗೆ ಸುಮಾರು 5,000 ಸಂಸ್ಥೆಗಳಲ್ಲಿ 1,66,690 ರೋಗಿಗಳು ದಾಖಲಾಗಿದ್ದು ಒಂದು ಸಂಸ್ಥೆಯಲ್ಲಿ ಸರಾಸರಿ 33.72 ರೋಗಿಗಳು ದಾಖಲಾದಂತಾಗಿದೆ. ಸರಾಸರಿ 30 ಎಚ್ಚರಿಕೆಯ ಮಟ್ಟವಾಗಿದೆ. ಇದೇ ವೇಳೆ, ಸತತ ಮೂರನೇ ವಾರವೂ ಕೊರೋನ ಸೋಂಕಿನ ಪ್ರಕರಣ ಹೆಚ್ಚಿದೆ. ವರ್ಷಾಂತ್ಯ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ಜನಸಂದಣಿ ಸೇರುವ ನಿರೀಕ್ಷೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ದೇಶದ 6,382 ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಮುಂಜಾಗರೂಕತೆ ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.