ಕುಂಬಳೆ: ಕ್ರಿಸ್ಮಸ್ ಆಚರಣೆಯ ಅಂಗವಾಗಿ ಭಾನುವಾರ ರಾತ್ರಿ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ವಿವಿಧ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು. ಸಂಭ್ರಮದ ದಿವ್ಯಬಲಿಪೂಜೆಗೆ ವಂದನೀಯ ಫಾ. ಮೆಲ್ವಿನ್ ಫೆರ್ನಾಂಡಿಸ್ ನೇತೃತ್ವ ನೀಡಿದರು. ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ಯಾರಲ್ಸ್ ಗಾಯನ ನಡೆಯಿತು. ದಿವ್ಯಬಲಿಪೂಜೆ ಸಂದರ್ಭ ಬಾಲಯೇಸುವನ್ನು ನಮಿಸಿ ಭಕ್ತರು ಕಾಣಿಕೆಗಳನ್ನು ಅರ್ಪಿಸಿದರು. ಕ್ರಿಸ್ಮಸ್ ಸಂದೇಶ ಸಾರುವ ಕ್ರಿಸ್ಮಸ್ ಟ್ರೀ, ಗೋದಲಿ, ಕ್ರಿಸ್ಮಸ್ ತಾತಾನ ಕುಣಿತ, ಸಿಡಿಮದ್ದು ಗಮನ ಸೆಳೆದುವು.
ದಿವ್ಯಬಲಿಪೂಜೆ ಬಳಿಕ ತೆರೆದ ವೇದಿಕೆಯಲ್ಲಿ ಪೆರ್ಮುದೆ ಸೈಂಟ್ ಲಾರೆನ್ಸ್ ಅಸೋಸಿಯೇಶನ್‍ನ ಆಶ್ರಯದಲ್ಲಿ ಕ್ರಿಸ್ಮಸ್ ಸೌಹಾರ್ದಕೂಟ ನಡೆಯಿತು. ಕೇಕ್ ತುಂಡರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾಜ ಸೇವಕ, ಪೈವಳಿಕೆ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಬೊಟ್ಟಾರಿ, ಕೇರಳ ಮುಸ್ಲಿಂ ಜಮಾಅತ್ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಂ. ಫಾ. ಮೆಲ್ವಿನ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇಗರ್ಜಿಯ ಪಾಲನ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೆರಾ, ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ, ಇಗರ್ಜಿಯ ಇಪ್ಪತ್ತೊಂದು ಆಯೋಗಗಳ ಸಂಚಾಲಕ ಪೀಟರ್ ರೋಡ್ರಿಗಸ್, ಅಂತರ್‍ಧರ್ಮೀಯ ಸಂವಾದ ಆಯೋಗದ ಸಂಚಾಲಕ ವಿನ್ಸೆಂಟ್ ರೋಡ್ರಿಗಸ್ ಉಪಸ್ಥಿತರಿದ್ದರು. ಸೈಂಟ್ ಲಾರೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಜೋಕಿಂ ಪ್ರಶಾಂತ್ ಕ್ರಾಸ್ತ ಸ್ವಾಗತಿಸಿ, ಕಾರ್ಯದರ್ಶಿ ಸಿಪ್ರಿಯನ್ ಡಿಸೋಜ ವಂದಿಸಿದರು. ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಇಗರ್ಜಿಯ ವಿವಿಧ ಪ್ರತಿಭೆಗಳಿಂದ ಹಾಡು, ನೃತ್ಯ ಮೊದಲಾದ ಮನೋರಂಜನಾ ಕಾರ್ಯಕ್ರಮಗಳು ನಡೆದುವು.

.jpg)
.jpg)
.jpg)
