ತಿರುವನಂತಪುರಂ: ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸುತ್ತಿರುವ ಪೋಲೀಸರಿಗೆ ಆನ್ ಲೈನ್ ವಂಚನೆ ಗ್ಯಾಂಗ್ ವಂಚಿಸಿದ ಅಪೂರ್ವ ಘಟನೆ ನಡೆದಿದೆ.
ತಿರುವನಂತಪುರಂ ಆಯುಕ್ತರ ಕಚೇರಿ ಖಾತೆಯಿಂದ ಹಣ ಕಳೆದು ಹೋಗಿದೆ. ಖಾತೆಯಿಂದ 25,000 ರೂ.ವಂಚಿಸಲಾಗಿದೆ. ಖಾತೆಯ ಅಧಿಕೃತ ಸಂಖ್ಯೆಗೆ ನಕಲಿ ಸಂದೇಶ ರವಾನಿಸಿ ಹಣ ಕಳವು ಮಾಡಲಾಗಿದೆ. ಸೈಬರ್ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಗರ ಪೋಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಯುತ್ತಿರುವ ಹಣದ ವ್ಯವಹಾರದ ಮಾಹಿತಿಯನ್ನು ಖಾತೆ ಅಧಿಕಾರಿಯ ಮೊಬೈಲ್ ಸಂಖ್ಯೆಗೆ ಸಂದೇಶವಾಗಿ ಕಳುಹಿಸಲಾಗುತ್ತದೆ. ಸೈಬರ್ ವಂಚನೆಗಳಿಗೆ ಬಲಿಯಾಗದಂತೆ ಮತ್ತು ಒಟಿಪಿ ಸಂಖ್ಯೆಗಳನ್ನು ವಿನಿಮಯ ಮಾಡಿಕೊಳ್ಳದಂತೆ ನಿರಂತರವಾಗಿ ಜನರಿಗೆ ಶಿಕ್ಷಣ ನೀಡುವ ಕಚೇರಿಯೇ ವಂಚನೆಗೆ ಬಲಿಯಾಗಿರುವುದು ದುರ್ದೈವ.
ಕಳೆದ ಸೋಮವಾರ ಬ್ಯಾಂಕ್‍ನಿಂದ ನಕಲಿ ಸಂದೇಶ ಬಂದಿದೆ. ಕೂಡಲೇ ಕೆವೈಸಿ ನವೀಕರಣ ಮಾಡದಿದ್ದರೆ ಖಾತೆ ರದ್ದಾಗುತ್ತದೆ ಎಂಬುದು ಸಂದೇಶದ ಸೂಚನೆಯಾಗಿತ್ತು. ಖಾತೆಯ ಅಧಿಕಾರಿ ಸಂದೇಶದಲ್ಲಿ ನಮೂದಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಒಟಿಪಿಯನ್ನು ಒದಗಿಸಿದರು. ಕೆಲವೇ ನಿಮಿಷಗಳಲ್ಲಿ ಎಸ್‍ಬಿಐನ ಶಾಖೆಯಿಂದ ಹಣ ಲಪಟಾವಣೆಗೊಂಡಿತು.
ಹಣ ನಾಪತ್ತೆಯಾಗಿರುವುದನ್ನು ಅರಿತ ಪೋಲೀಸರು ಕೂಡಲೇ 1930 ಸಂಖ್ಯೆಯ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದ್ದಾರೆ. ವಂಚಕರು ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಿ ಹಣ ಹಿಂಪಡೆದಿರುವುದು ಕಂಡುಬಂದಿದೆ.





