ತಿರುವನಂತಪುರ: ಲೋಕಸಭಾ ಚುನಾವಣೆಯ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲವಾದರೂ, ಕೇರಳಲ್ಲಿ ಚುನಾವಣಾ ಕಾವು ಏರಿದೆ. ಆಡಳಿತಾರೂಢ ಎಲ್ ಡಿಎಫ್ ಹಾಗೂ ಪ್ರಮುಖ ಎದುರಾಳಿ ಯುಡಿಎಫ್ ನಡುವೆ ವಾಕ್ಸಮರ ಆರಂಭವಾಗಿದೆ.
ಎಲ್ ಡಿಎಫ್ ಮುಖಂಡ ಎಂ.ವಿ.ಗೋವಿಂದನ್ ಅವರ ಪ್ರಕಾರ, ಎಡಪಕ್ಷಗಳು ಮಾತ್ರವೇ ಕೇರಳದ ಜನತೆಗೆ ವಿಶ್ವಾಸಾರ್ಹ ಪಕ್ಷವಾಗಿ ಉಳಿದುಕೊಂಡಿದೆ.
ಚುನಾವಣಾ ಬಾಂಡ್ ವಿಚಾರದಲ್ಲಿರಲಿ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿರಲಿ, ಸಿಪಿಎಂ ಮಾತ್ರವೇ ಮತದಾರರು ವಿಶ್ವಾಸ ಇರಿಸಬಹುದಾದ ಪಕ್ಷ ಎಂದು ಗೋವಿಂದನ್ ಪಕ್ಷದ ಮುಖವಾಣಿ 'ದೇಶಾಭಿಮಾನಿ'ಯ ಮಾರ್ಚ್ 14ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಗೋವಿಂದನ್ ಪ್ರತಿಪಾದಿಸಿದ್ದರು. ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ಮೆಟ್ಟಿಲೇರಿದ ಏರಿದ ಪಕ್ಷ ಸಿಪಿಎಂ ಮಾತ್ರ. ಸಿಪಿಎಂ ಚುನಾವಣಾ ಬಾಂಡ್ ಮೂಲಕ ದೇಣಿಗೆ ಸ್ವೀಕರಿಸಿಲ್ಲ. ಕಾಂಗ್ರೆಸ್ ಸೇರಿದಂತೆ ಇತರ ಎಲ್ಲ ಪಕ್ಷಗಳು ಸ್ವೀಕರಿಸಿವೆ ಎನ್ನುವುದು ಅವರ ವಾದ.
ಈ ಆರೋಪವನ್ನು ಅಲ್ಲಗಳೆದಿರುವ ಕಾಂಗ್ರೆಸ್ ಮುಖಂಡ ಸತೀಶನ್, ದೇಶದಲ್ಲಿ ಕೋಮು ರಾಜಕೀಯದ ವಿರುದ್ಧ ಕಾಂಗ್ರೆಸ್ ಏಕಾಂಗಿ ಹೋರಾಟ ನಡೆಸುತ್ತಿದೆ. ವಾಸ್ತವವಾಗಿ ಬಿಜೆಪಿ ಹಾಗೂ ಸಿಪಿಎಂ ಅಪವಿತ್ರ ಮೈತ್ರಿ ಹೊಂದಿವೆ ಎಂಬ ಪ್ರತಿದಾವನ್ನು ಅವರು ಮುಂದಿಟ್ಟಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಇತರ ಹಲವು ಮಂದಿ ಮುಖಂಡರು ಷಾಮೀಲಾಗಿರುವ ಆರೋಪ ಎದುರಿಸುತ್ತಿರುವ ಎಸ್‌ಎನ್ ಸಿ-ಕವಲಿನ್ (ಹಣಕಾಸು ಹಗರಣ) ಪ್ರಕರಣದ ತನಿಖೆ ಇನ್ನೂ ಪ್ರಗತಿ ಆಗದಿರುವುದು ಇದಕ್ಕೆ ಸಾಕ್ಷಿ ಎಂದು ಅವರು ಹೇಳುತ್ತಾರೆ. ಈ ಪ್ರಕರಣದಲ್ಲಿ ಸಿಬಿಐ ವಕೀಲರು 38 ಬಾರಿ ಮುಂದೂಡಿಕೆಗೆ ಮನವಿ ಮಾಡಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.





