ತಿರುವನಂತಪುರ: ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಫುಟ್‌ಬಾಲ್ ಪಂದ್ಯಾವಳಿಯ ವೇಳೆ ಐವರಿ ಕೋಸ್ಟ್‌ನ ಫುಟ್‌ಬಾಲ್ ಆಟಗಾರನನ್ನು ಪ್ರೇಕ್ಷಕರು ಅಟ್ಟಾಡಿಸಿ ಥಳಿಸಿದ್ದಾರೆ. ಗುಂಪು ತನ್ನನ್ನು ಜನಾಂಗೀಯ ನಿಂದನೆ ಮಾಡಿದೆ ಎಂದೂ ಸಂತ್ರಸ್ತ ಆಟಗಾರ ಆರೋಪಿಸಿದ್ದಾರೆ.
ದೈರ್ರಾಸೌಬಾ ಹಾಸನ್ ಜೂನಿಯರ್ ಎಂಬ ಆಟಗಾರನನ್ನು ಅರಿಕೋಡ್‌ನ ಮೈದಾನದಲ್ಲಿ ಜನರ ಗುಂಪು ಓಡಿಸಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರೇಕ್ಷಕರ ಮೇಲೆ ಫುಟ್ಬಾಲ್ ಆಟಗಾರರೊಬ್ಬರು ಕಾಲಿನಿಂದ ಒದೆದಿದ್ದಾರೆ ಎಂದ ಆರೋಪಿಸಲಾಗಿದ್ದು, ಇದು ಘಟನೆಗೆ ಕಾರಣವಾಯಿತು ಎನ್ನಲಾಗಿದೆ.
ವೈರಲ್ ವಿಡಿಯೋದಲ್ಲಿ ಬಿಳಿ ಟೀ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಆಫ್ರಿಕನ್ ವ್ಯಕ್ತಿಯನ್ನು ಜನರ ಹಲ್ಲೆಯಿಂದ ರಕ್ಷಿಸುತ್ತಿರುವುದನ್ನು ಕಾಣಬಹುದು. ನಂತರ, ಫುಟ್‌ಬಾಲ್ ಆಟಗಾರ ಗೇಟ್‌ನಿಂದ ಹೊರಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸಂತ್ರಸ್ತ ಆಟಗಾರ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ತಂಡಕ್ಕೆ ಕಾರ್ನರ್ ಕಿಕ್ ಸಿಕ್ಕಿತ್ತು, ಈ ವೇಳೆ ಪ್ರೇಕ್ಷಕರು ತನ್ನನ್ನು ಜನಾಂಗೀಯ ನಿಂದನೆ ಮಾಡಿದ್ದಾರೆ. ಅಲ್ಲದೆ, ಗುಂಪು ತನ್ನ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದೂ ಅವರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಹಾಸನ ಜೂನಿಯರ್ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜವಾಹರ್ ಮಾವೂರ್ ಎಂಬ ಫುಟ್ಬಾಲ್ ಕ್ಲಬ್ ಅನ್ನು ಪ್ರತಿನಿಧಿಸುತ್ತಿದ್ದರು. ಸೆವೆನ್ಸ್ ಫುಟ್ಬಾಲ್ ಮಲಪ್ಪುರಂನಲ್ಲಿ ಪ್ರಸಿದ್ಧ ಕ್ರೀಡಾಕೂಟವಾಗಿದೆ.