HEALTH TIPS

ನಿರ್ದೇಶನ ಉಲ್ಲಂಘಿಸಿದ ಆರ್‌.ಎನ್‌.ರವಿ: ರಾಜ್ಯಪಾಲರ ನಡೆಗೆ ಕೋರ್ಟ್‌ ಛೀಮಾರಿ

            ವದೆಹಲಿ: ಡಿಎಂಕೆ ಮುಖಂಡ ಕೆ. ಪೊನ್ಮುಡಿ ಅವರು ತಪ್ಪಿತಸ್ಥ ಎಂದು ಘೋಷಿಸಿದ್ದಕ್ಕೆ ತಾನು ತಡೆಯಾಜ್ಞೆ ನೀಡಿದ ನಂತರವೂ, ತಮಿಳುನಾಡು ಸಂಪುಟಕ್ಕೆ ಅವರನ್ನು ಸೇರಿಸಿಕೊಳ್ಳುವುದಕ್ಕೆ ಒಪ್ಪಿಗೆ ನೀಡದ ರಾಜ್ಯಪಾಲ ಆರ್.ಎನ್. ರವಿ ಅವರ ನಡವಳಿಕೆಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ.

              ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ 24 ಗಂಟೆಗಳಲ್ಲಿ ತೀರ್ಮಾನ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ರವಿ ಅವರಿಗೆ ಗುರುವಾರ ಸೂಚಿಸಿದೆ.

             ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ‍ಪ್ರಕರಣದಲ್ಲಿ ಪೊನ್ಮುಡಿ ಅವರು ತಪ್ಪಿತಸ್ಥ ಎಂಬ ತೀರ್ಪು ಮತ್ತು ಅವರಿಗೆ ವಿಧಿಸಲಾಗಿದ್ದ ಮೂರು ವರ್ಷಗಳ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ಈಚೆಗೆ ತಡೆ ನೀಡಿದೆ. ಪೊನ್ಮುಡಿ ಅವರನ್ನು ಸಂಪುಟಕ್ಕೆ ಸೇರಿಸಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದರೂ ರಾಜ್ಯಪಾಲರು ಅದಕ್ಕೆ ಒಪ್ಪಿಲ್ಲ.

               ರಾಜ್ಯಪಾಲ ರವಿ ಅವರು ಸುಪ್ರೀಂ ಕೋರ್ಟ್‌ನ ಸೂಚನೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ಪೊನ್ಮುಡಿ ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವುದು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗುತ್ತದೆ ಎಂಬ ಮಾತನ್ನು ರಾಜ್ಯಪಾಲರು ಯಾವ ಆಧಾರದಲ್ಲಿ ಹೇಳುತ್ತಾರೆ ಎಂದು ಕೂಡ ಪೀಠವು ಪ್ರಶ್ನಿಸಿದೆ.

              'ರಾಜ್ಯಪಾಲರ ನಡೆಯ ಕುರಿತು ನಮಗೆ ತೀವ್ರ ಕಳವಳ ಇದೆ. ಈ ಮಾತನ್ನು ನಾವು ನ್ಯಾಯಾಲಯ ದಲ್ಲಿ ಗಟ್ಟಿಯಾಗಿ ಹೇಳಲು ಬಯಸಿರಲಿಲ್ಲ, ಆದರೆ ರಾಜ್ಯಪಾಲರು ಸುಪ್ರೀಂ ಕೋರ್ಟ್‌ನ ಮಾತನ್ನು ಧಿಕ್ಕರಿಸುತ್ತಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡಿದವರು ಆ ಕೆಲಸವನ್ನು ಸರಿಯಾಗಿ ಮಾಡಿಲ್ಲ. ವ್ಯಕ್ತಿಯೊಬ್ಬ ಅಪರಾಧಿ ಎಂದು ನೀಡಲಾದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ ಎಂದಾದರೆ, ಸುಪ್ರೀಂ ಕೋರ್ಟ್‌ ಕೊಟ್ಟ ತಡೆಯು ಜಾರಿಗೆ ಬಂದಿದೆ ಎಂದೇ ಅರ್ಥ' ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದ ತ್ರಿಸದಸ್ಯ ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಉದ್ದೇಶಿಸಿ ಹೇಳಿತು.

'ನಿಮ್ಮ ಕಡೆಯವರಿಂದ ಶುಕ್ರವಾರ ಉತ್ತರ ಬಂದಿಲ್ಲ ಎಂದಾದರೆ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚಿಸಿ ನಾವು ರಾಜ್ಯ‍ಪಾಲರಿಗೆ ಆದೇಶ ಹೊರಡಿಸುತ್ತೇವೆ' ಎಂದು ಪೀಠವು ಅಟಾರ್ನಿ ಜನರಲ್ ಅವರಿಗೆ ಹೇಳಿತು.

                ವಿಚಾರಣೆ ಆರಂಭವಾದಾಗ ತಮಿಳುನಾಡು ಸರ್ಕಾರದ ಪರವಾಗಿ ಪೀಠಕ್ಕೆ ವಿವರಣೆ ನೀಡಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಮುಖ್ಯಮಂತ್ರಿಯ ಶಿಫಾರಸು ಆಧರಿಸಿ ಕ್ರಮ ಕೈಗೊಳ್ಳಲು ರಾಜ್ಯಪಾಲರು ನಿರಾಕರಿಸಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಿದರು.

              'ಅಟಾರ್ನಿ ಜನರಲ್ ಅವರೇ, ನಿಮ್ಮ ರಾಜ್ಯಪಾಲರು ಏನು ಮಾಡುತ್ತಿದ್ದಾರೆ? ತಪ್ಪಿತಸ್ಥ ಎಂದು ಘೋಷಿಸಿದ್ದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ ರಾಜ್ಯಪಾಲರು ತಾವು ಅವರಿಗೆ ಪ್ರಮಾಣವಚನ ಬೋಧಿಸುವುದಿಲ್ಲ ಎನ್ನುತ್ತಿದ್ದಾರೆ. ನಾವು ಕೆಲವು ಗಂಭೀರ ಮಾತುಗಳನ್ನು ಹೇಳಬೇಕಾಗುತ್ತದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂಬುದನ್ನು ನಿಮ್ಮ ರಾಜ್ಯಪಾಲರಿಗೆ ತಿಳಿಸಿ' ಎಂದು ಕೂಡ ನ್ಯಾಯಪೀಠವು ಹೇಳಿತು.

              ಪೊನ್ಮುಡಿ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠವೊಂದು ತಡೆಯಾಜ್ಞೆ ನೀಡಿದೆ ಎಂದಾದಲ್ಲಿ, 'ಇದು ಕಳಂಕವನ್ನು ಅಳಿಸುವ ಕೆಲಸ ಮಾಡುವುದಿಲ್ಲ' ಎಂದು ಹೇಳುವ ಅಧಿಕಾರವು ರಾಜ್ಯಪಾಲರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತು.

              ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರವಾಗಿ ವೆಂಕಟರಮಣಿ ಅವರು ತಾಂತ್ರಿಕ ನೆಲೆಯಲ್ಲಿ ಕೆಲವು ಆಕ್ಷೇಪಗಳನ್ನು ಎತ್ತಿದರು. ಆದರೆ ಪೀಠವು, 'ಅಟಾರ್ನಿ ಅವರೇ, ರಾಜ್ಯಪಾಲರು ಸಂವಿಧಾನವನ್ನು ಪಾಲಿಸದೆ ಇದ್ದಾಗ ಸರ್ಕಾರ ಏನು ಮಾಡಬೇಕು' ಎಂದು ಪ್ರಶ್ನಿಸಿತು.

ಪೊನ್ಮುಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಶಿಫಾರಸಿಗೆ ಒಪ್ಪಿಗೆ ನೀಡಲು ರಾಜ್ಯಪಾಲರು ನಿರಾಕರಿಸಿದ್ದರು. ಪೊನ್ಮುಡಿ ಅವರು ತಪ್ಪಿತಸ್ಥ ಎಂದು ನೀಡಲಾದ ತೀರ್ಪು ಹಾಗೂ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ; ಆದರೆ ಅವೆರಡನ್ನು ಅನೂರ್ಜಿತಗೊಳಿಸಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

ಕೋರ್ಟ್‌ ಹೇಳಿದ್ದು...

           'ಸಚಿವರಾಗಿದ್ದ ವ್ಯಕ್ತಿಯ ಬಗ್ಗೆ ನಮಗೆ ಭಿನ್ನ ಅಭಿಪ್ರಾಯ ಇರಬಹುದು. ಆದರೆ ಅದು ವಿಷಯವೇ ಅಲ್ಲ.
             ಇಲ್ಲಿರುವುದು ಸಾಂವಿಧಾನಿಕ ನಿಯಮಕ್ಕೆ ಸಂಬಂಧಿಸಿದ ವಿಷಯ. ತಾವು ಈ ವ್ಯಕ್ತಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಯಸುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ...ಅದು ಸಂಸದೀಯ ಪ್ರಜಾತಂತ್ರ ವ್ಯವಸ್ಥೆ. ರಾಜ್ಯಪಾಲರು ನಾಮಮಾತ್ರದ ಮುಖ್ಯಸ್ಥ. ಸಲಹೆ ನೀಡುವ ಅಧಿಕಾರ ಮಾತ್ರ ಅವರಿಗೆ ಇದೆ, ಅಷ್ಟೇ...'

              ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ

ಸರ್ಕಾರದ ವಾದ

             ರಾಜ್ಯಪಾಲ ಆರ್.ಎನ್. ರವಿ ಅವರು ಪರ್ಯಾಯ ಸರ್ಕಾರವೊಂದನ್ನು ನಡೆಸಲು ಯತ್ನಿಸುತ್ತಿದ್ದಾರೆ.
              ಕೆ. ಪೊನ್ಮುಡಿ ಅವರನ್ನು ಮತ್ತೆ ಸಚಿವರನ್ನಾಗಿ ನೇಮಿಸಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾಡಿರುವ ಶಿಫಾರಸನ್ನು ಒಪ್ಪಿಕೊಳ್ಳುವಂತೆ ರವಿ ಅವರಿಗೆ ಸೂಚನೆ ನೀಡಬೇಕು. ತಪ್ಪಿತಸ್ಥ ಎಂಬ ತೀರ್ಪಿಗೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ಬಂದ ನಂತರದಲ್ಲಿ ಪೊನ್ಮುಡಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಂವಿಧಾನಿಕವಾಗಿ ಯಾವ ಅಡ್ಡಿಯೂ ಇಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries