HEALTH TIPS

ಲಕ್ಷದ್ವೀಪದ ಪ್ರಯಾಣಿಕರ ಹಡಗು ಮಂಗಳೂರಿಗೆ ಆಗಮನ

 ಮಂಗಳೂರು: ಕೋವಿಡ್-ಲಾಕ್‌ಡೌನ್ ಹಿನ್ನೆಲೆಯಲ್ಲಿ 2020ರಲ್ಲಿ ರದ್ದಾಗಿದ್ದ ಲಕ್ಷದ್ವೀಪ-ಮಂಗಳೂರು ಪ್ರಯಾಣಿಕರ ಹಡಗು ನಾಲ್ಕು ವರ್ಷದ ಬಳಿಕ ಗುರುವಾರ ಸಂಜೆ ನಗರದ ಹಳೆಯ ಬಂದರಿಗೆ ಆಗಮಿಸಿದೆ.

ಗುರುವಾರ ಬೆಳಗ್ಗೆ 7 ಗಂಟೆಗೆ ಲಕ್ಷದ್ವೀಪದ ಕದ್ಮತ್ ದ್ವೀಪದಿಂದ ಪ್ರಯಾಣ ಆರಂಭಿಸಿದ ಕೊಚ್ಚಿಯ 'ಪರೊಲಿ' ಎಂಬ ಹೆಸರಿನ ಹಡಗು ಅಲ್ಲಿನ ಮತ್ತೊಂದು ದ್ವೀಪಕ್ಕೆ ತಲುಪಿದೆ.

ಬಳಿಕ ಅಲ್ಲಿಂದ 8:15ಕ್ಕೆ ಪ್ರಯಾಣ ಆರಂಭಿಸಿದ ಹಡಗು ಸಂಜೆ 4ಕ್ಕೆ ಮಂಗಳೂರು ಬಂದರು ಹೊರವಲಯಕ್ಕೆ ತಲುಪಿ ಲಂಗರು ಹಾಕಿತು.

ಹಳೆಯ ಬಂದರ್‌ನಲ್ಲಿ ಹಡಗೊಂದು ಸರಕು ತುಂಬಿಸಿಕೊಳ್ಳುತ್ತಿದ್ದ ಕಾರಣ ಮಂಗಳೂರು ಹಳೆಯ ಬಂದರು ಪ್ರವೇಶಿಸಲು 'ಪರೊಲಿ' ಹಡಗು ಸಂಜೆ 4:30ರ ತನಕ ಕಾಯಬೇಕಾಯಿತು. ಕೊನೆಗೂ ಸಂಜೆ ಸುಮಾರು 4:45ಕ್ಕೆ ಹಳೆಯ ಬಂದರು ತಲುಪಿದೆ. ಈ ಹಡಗು ಶನಿವಾರ ಮುಂಜಾನೆ ಮರಳಿ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಲಿದೆ.


ಈ ಹಡಗಿನಲ್ಲಿ 160 ಪ್ರಯಾಣಿಕರು, ಓರ್ವ ಪೈಲೆಟ್, ಓರ್ವ ಚೀಫ್ ಇಂಜಿನಿಯರ್, ಓರ್ವ ಸಹ ಇಂಜಿನಿಯರ್, ಎಂಟು ಮಂದಿ ಕಾರ್ಮಿಕರಿದ್ದರು. ಮಾಜಿ ಶಾಸಕ ಜೆ.ಆರ್.ಲೋಬೊ ಮತ್ತಿತರರು ಪ್ರಯಾಣಿಕರನ್ನು ಬರಮಾಡಿಕೊಂಡರು.

ಹಿಂದೆ ಮಂಗಳೂರು-ಲಕ್ಷದ್ವೀಪ ನಡುವೆ ಸಂಚರಿಸುತ್ತಿದ್ದ ದೊಡ್ಡ ಹಡಗಿನ ಪ್ರಯಾಣದ ಅವಧಿ 13 ಗಂಟೆಯಾಗಿತ್ತು. ಆದರೆ ಈ ಹೊಸ ಹಡಗಿನ ಪ್ರಯಾಣದ ಅವಧಿ ಕೇವಲ 7 ಗಂಟೆಯಾಗಿರುತ್ತದೆ. 7 ವರ್ಷದ ಹಿಂದೆ ಹೈಸ್ಪೀಡ್ ಹಡಗು ಲಕ್ಷದ್ವೀಪ ಮತ್ತು ಮಂಗಳೂರು ಸಂಚರಿಸುತ್ತಿತ್ತು. ಇದೀಗ ಮತ್ತೊಮ್ಮೆ ಹೈಸ್ಪೀಡ್ ಹಡಗು ಲಕ್ಷದ್ವೀಪ ಮತ್ತು ಮಂಗಳೂರು ನಡುವೆ ಪ್ರಯಾಣ ಆರಂಭಿಸಿದೆ.

"ಮಂಗಳೂರಿನಲ್ಲಿ ನಮ್ಮ ಸಂಬಂಧಿಕರು, ಸ್ನೇಹಿತರಿದ್ದಾರೆ. ಕೋವಿಡ್ ಬಳಿಕ ಮಂಗಳೂರಿಗೆ ಪ್ರಯಾಣಿಕರ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಕೇರಳದ ಕೊಚ್ಚಿಗೆ ಬಂದು, ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ಬರುತ್ತಿದ್ದೆವು. ಇದೀಗ ಮಂಗಳೂರಿಗೆ ನೇರ ಪ್ರಯಾಣದ ಹೈಸ್ಪೀಡ್ ಹಡಗು ವ್ಯವಸ್ಥೆ ಕಲ್ಪಿಸಿದ್ದರಿಂದ ತುಂಬಾ ಅನುಕೂಲವಾಗಿದೆ. ಲಕ್ಷದ್ವೀಪದ ನೂರಾರು ಮಂದಿ ಶಿಕ್ಷಣ ಮತ್ತಿತರ ಕೆಲಸ ಕಾರ್ಯಗಳಿಗೆ ಮಂಗಳೂರನ್ನು ಅವಲಂಬಿಸಿದ್ದಾರೆ. ಹಾಗಾಗಿ ಈ ವ್ಯವಸ್ಥೆ ಮುಂದುವರಿಯಬೇಕು. ಅದಕ್ಕಾಗಿ ಎರಡೂ ಕಡೆಯ ಆಡಳಿತವು ಹೆಚ್ಚಿನ ಮುುತುವರ್ಜಿ ವಹಿಸಬೇಕಿದೆ".

-ಡಾ.ಲತೀಫ್, ಲಕ್ಷದ್ವೀಪ ನಿವಾಸಿ

"ಶಾಪಿಂಗ್ ಮಾಡಲು ಮಂಗಳೂರಿಗೆ ಆಗಮಿಸಿದ್ದೇನೆ. ಎರಡು ದಿನ ಇಲ್ಲೇ ಉಳಿದು ಅಗತ್ಯ ವಸ್ತುಗಳನ್ನು ಖರೀದಿಸಿ ಮರಳಿ ಲಕ್ಷದ್ವೀಪಕ್ಕೆ ತೆರಳಲಿದ್ದೇನೆ. ಮಂಗಳೂರಿಗೆ ನೇರವಾಗಿ ಪ್ರಯಾಣಿಕರ ಹಡಗಿನ ವ್ಯವಸ್ಥೆ ಕಲ್ಪಿಸಿರುವುದು ತುಂಬಾ ಖುಷಿಯಾಗಿದೆ".

-ಮುತ್ತುಕೋಯ, ಲಕ್ಷದ್ವೀಪ ನಿವಾಸಿ

"ಲಕ್ಷದ್ವೀಪದ ಆಡಳಿತವು ಖಾಸಗಿ ಹಡಗಿನ ಜತೆ ಮಾಡಿಕೊಂಡ ಒಪ್ಪಂದದಂತೆ ಪ್ರತಿಯೊಬ್ಬ ಪ್ರಯಾಣಿಕರಿಗೆ 450 ರೂ. ಪ್ರಯಾಣ ದರ ವಿಧಿಸಿದೆ".

-ಲಕ್ಷದ್ವೀಪದ ಓರ್ವ ಪ್ರಯಾಣಿಕ

"ಕೊರೋನಾ ಬಳಿಕ ಪ್ರಯಾಣಿಕರ ಹಡಗು ಸಂಚಾರ ಪುನಾರಂಭಿಸಲು ಯಾರೂ ಮುತುವರ್ಜಿ ವಹಿಸದಿದ್ದ ಕಾರಣ ಪ್ರಯಾಣಿಕರು ಕೇರಳದ ಕೊಚ್ಚಿಯಿಂದಲೇ ಲಕ್ಷದ್ವೀಪಕ್ಕೆ ಸಂಚರಿಸುವಂತಾಗಿತ್ತು. ಇತ್ತೀಚೆಗೆ ಕೇರಳದ ಮಾಜಿ ಸಂಸದ ಹಮ್ದುಲ್ಲಾ ಸಯ್ಯದ್ ಮಂಗಳೂರಿಗೆ ಆಗಮಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಈಗ ಪುನಾರಂಭ ಮಾಡಲಾಗಿದೆ. ಇದು ಯಥಾ ಸ್ಥಿತಿಯಲ್ಲಿ ಮುಂದುವರಿದರೆ ಮಂಗಳೂರಿನ ವ್ಯಾಪಾರ-ವಹಿವಾಟು ವೃದ್ಧಿಯಾಗಲು ಅನುಕೂಲವಾಗಲಿದೆ".

-ಅಬೂಬಕರ್ ಅಶ್ರಫ್, ಬೆಂಗ್ರೆ

ಲಕ್ಷದ್ವೀಪ ಭೇಟಿ ಹೊರಗಿನವರಿಗೆ ಅಷ್ಟು ಸುಲಭವಿಲ್ಲ

ಲಕ್ಷದ್ವೀಪವು ಕೇಂದ್ರಾಡಳಿತ ಪ್ರದೇಶವಾಗಿದೆ. ಹಾಗಾಗಿ ಮಂಗಳೂರಿನಿಂದ ಅಲ್ಲಿಗೆ ತೆರಳುವವರಿಗೆ ಪ್ರಯಾಣ ಅಷ್ಟು ಸುಲಭವಿಲ್ಲ. ಸಂಬಂಧಪಟ್ಟ ಇಲಾಖೆಗಳ ಅನುಮತಿಯ ಅಗತ್ಯವಿದೆ. ಲಕ್ಷದ್ವೀಪದ ನಿವಾಸಿಗಳ ಪರಿಚಯವಿದ್ದು, ಅವರಿಂದ ಅಲ್ಲಿಗೆ ತೆರಳಲು ಆಹ್ವಾನ ಬೇಕು. ಬಳಿಕ ಅರ್ಜಿ ಸಲ್ಲಿಸಿ, ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆದು ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಟ್ರಾವೆಲ್ ಏಜೆನ್ಸಿಗಳ ಮೂಲಕವೂ ತೆರಳಬಹುದು. ಆದರೆ ಇದು ತುಸು ದುಬಾರಿ ಪ್ರಯಾಣ ವಾಗಿದೆ. ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಹೊರಗಿನ ಜನರು ಲಕ್ಷದ್ವೀಪಕ್ಕೆ ಭೇಟಿ ನೀಡುವ ಪ್ರಕ್ರಿಯೆಯು ಸರಳೀಕರಣಗೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಸರಕು ಬೋಟ್‌ಗಳ ಸಂಖ್ಯೆಯೂ ಇಳಿಕೆ

ಸಿಮೆಂಟ್, ಇಟ್ಟಿಗೆ, ಮರಳು ಇತ್ಯಾದಿಯ ಬಗೆಯ ನಿರ್ಮಾಣ ಸಾಮಗ್ರಿಗಳ ಸಹಿತ ತರಕಾರಿ, ಹಣ್ಣು, ಅಗತ್ಯ ವಸ್ತುಗಳು ಲಕ್ಷದ್ವೀಪಕ್ಕೆ ಹೊರಗಿನಿಂದಲೇ ಹೋಗಬೇಕು. ಹಿಂದೆ ಮಂಗಳೂರಿನಿಂದ ಪ್ರತೀ ತಿಂಗಳು ನೂರಕ್ಕೂ ಅಧಿಕ ಸರಕು ಹಡಗುಗಳು ಮಂಗಳೂರಿನಿಂದ ಹೋಗುತ್ತಿದ್ದವು. ಕೊರೋನ ಬಳಿಕ ಕೇರಳಕ್ಕೆ ಶಿಫ್ಟ್ ಆಗಿದೆ. ಹಾಗಾಗಿ ಇದೀಗ ಮಂಗಳೂರಿನಿಂದ ತಿಂಗಳಿಗೆ ಏಳೆಂಟು ಹಡಗುಗಳು ಮಾತ್ರ ಹೋಗುತ್ತಿವೆ. ಇಲ್ಲಿಂದ ಸರಕು ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries