ನವದೆಹಲಿ: ಹಿಂದೊಮ್ಮೆ ನಿರ್ಭಯಾಗೆ ನ್ಯಾಯ ನೀಡಬೇಕು ಎಂದು ಹೋರಾಡಿದ ಎಎಪಿ ನಾಯಕರೀಗ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಭಾನುವಾರ ಹೇಳಿದ್ದಾರೆ.
0
samarasasudhi
ಮೇ 19, 2024
ನವದೆಹಲಿ: ಹಿಂದೊಮ್ಮೆ ನಿರ್ಭಯಾಗೆ ನ್ಯಾಯ ನೀಡಬೇಕು ಎಂದು ಹೋರಾಡಿದ ಎಎಪಿ ನಾಯಕರೀಗ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಭಾನುವಾರ ಹೇಳಿದ್ದಾರೆ.
ಅಲ್ಲದೆ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಎಎಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇದ್ದಿದ್ದರೆ ಬಹುಶಃ ಇಷ್ಟು ಕೆಟ್ಟ ಸ್ಥಿತಿ ತಮಗೆ ಎದುರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
'ಅಂದು ನಿರ್ಭಯಾಗೆ ನ್ಯಾಯ ಒದಗಿಸಬೇಕೆಂದು ನಾವೆಲ್ಲರೂ ಬೀದಿಗಿಳಿದಿದ್ದೆವು. ಇಂದು 12 ವರ್ಷಗಳ ನಂತರ ಸಿಸಿಟಿವಿ ದೃಶ್ಯಗಳನ್ನು ಕಣ್ಮರೆಯಾಗಿಸಿ ಆರೋಪಿಯ ರಕ್ಷಣೆಗೆ ಬೀದಿಗಿಳಿದಿದ್ದೀರಾ? ಅವರು ಮನೀಶ್ ಸಿಸೋಡಿಯಾ ಅವರಿಗಾಗಿ ಇಷ್ಟು ಬಲ ತೋರಿಸಬಹುದಿತ್ತು. ಒಂದು ವೇಳೆ ಸಿಸೋಡಿಯಾ ಇದ್ದಿದ್ದರೆ ನನಗೆ ಇಷ್ಟು ಕೆಟ್ಟ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮೇ 13ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಸಿಎಂ ನಿವಾಸಕ್ಕೆ ತೆರಳಿದ್ದಾಗ ಸಿಎಂ ಅಪ್ತ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಮಾಲಿವಾಲ್ ಆರೋಪಿಸಿದ್ದರು.
ಆದರೆ ಕೇಜ್ರಿವಾಲ್ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಲು ಮಾಲಿವಾಲ್ ಅವರಿಗೆ ಬಿಜೆಪಿ 'ಬ್ಲ್ಯಾಕ್‌ಮೇಲ್' ಮಾಡಿದೆ. ಅಲ್ಲದೆ ಕೇಜ್ರಿವಾಲ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿ ಸೂಚನೆಯಂತೆ ಮಾಲಿವಾಲ್ ವರ್ತಿಸುತ್ತಿದ್ದಾರೆ ಎಂದು ಎಎಪಿ ದೂರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಭವ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.