ಕುಂಬಳೆ: ಕುಂಬಳೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಆರ್ಥಿಕ ಅವ್ಯವಹಾರದ ಹಿನ್ನೆಲೆಯಲ್ಲಿ ಮರ್ಚಂಟ್ಸ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿ ಆಡಳಿತ ಸಮಿತಿಯನ್ನು ಸಹಕಾರಿ ಇಲಾಖೆ ಅಮಾನತುಗೊಳಿಸುತ್ತಿದ್ದಂತೆ, 'ಇಡಿ'ದಾಳಿಯ ಭೀತಿ ಎದುರಾಗಿದೆ. ವ್ಯಾಪಾರಿಗಳು ಹಾಗೂ ವ್ಯಾಪಾರಿ ಸಂಸ್ಥೆಗಳ ಕ್ಷೇಮಾಭಿವೃದ್ಧಿ ಗುರಿಯೊಂದಿಗೆ ಆರಂಭಗೊಂಡಿರುವ ಕುಂಬಳೆ ಮರ್ಚಂಟ್ಸ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದುಬರುತ್ತಿರುವ ಬಗ್ಗೆ ಗ್ಗೆ ಸೊಸೈಟಿ ಸದಸ್ಯ ವಿಕ್ರಂ ಪೈ ಹೈಕೋರ್ಟಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಸೊಸೈಟಿ ಆಡಳಿತ ಮಂಡಳಿ ಅಮಾನತುಗೊಳಿಸಿ, ಆಡಳಿತಾಧಿಕಾರಿ ನೇಮಿಸಿ ಆದೇಶ ಹೊರಡಿಸಿತ್ತು. ಪ್ರಸಕ್ತ ವಿಕ್ರಂ ಪೈ ಅವರು ಸೊಸೈಟಿಯಲ್ಲಿನ ಆರ್ಥಿಕ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಇ.ಡಿಗೂ ದೂರು ಸಲ್ಲಿಸಿದ್ದು, ಯಾವುದೇ ಹಂತದಲ್ಲೂ ಇಡಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ.
ಒಂಬತ್ತು ಮಂದಿ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿ ಸಮಿತಿಗೆ ವಿಕ್ರಂ ಪೈ ಕಳೆದ ವರ್ಷ ಜೂನ್‍ನಲ್ಲಿ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಸೊಸೈಟಿ ಭ್ರಷ್ಟಾಚಾರದ ಬಗ್ಗೆ ಸಲ್ಲಿಸಲಾದ ದೂರು ಪರಿಗಣಿಸಿ ಹೈಕೋರ್ಟು ಕ್ರಮಕ್ಕೆ ಮುಂದಾಗುತ್ತಿದ್ದಂತೆ ಒಬ್ಬೊಬ್ಬ ಸದಸ್ಯ ರಾಜೀನಾಮೆ ಸಲ್ಲಿಸುತ್ತಾ ಬಂದಿದ್ದು, ಪ್ರಸಕ್ತ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘ ಆಡಳಿತ ಸಮಿತಿಯನ್ನು ಅಮಾನತುಗೊಳಿಸಿದೆ.

