ಜಲಪಾಯಿಗುರಿ: ಬಾಂಗ್ಲಾದೇಶದ ನೂರಾರು ನಾಗರಿಕರು ಆಶ್ರಯ ಕೋರಿ ಭಾರತಕ್ಕೆ ವಲಸೆ ಬರಲು ಸಿದ್ಧರಾಗಿದ್ದು, ಪಶ್ಚಿಮ ಬಂಗಾಳ ಜಿಲ್ಲೆಯ ಜಲಪಾಯಿಗುರಿ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಬಾಂಗ್ಲಾದ ಗಡಿಯಲ್ಲಿ ಬುಧವಾರ ಗುಂಪುಗೂಡಿದ್ದರು.
0
samarasasudhi
ಆಗಸ್ಟ್ 09, 2024
ಜಲಪಾಯಿಗುರಿ: ಬಾಂಗ್ಲಾದೇಶದ ನೂರಾರು ನಾಗರಿಕರು ಆಶ್ರಯ ಕೋರಿ ಭಾರತಕ್ಕೆ ವಲಸೆ ಬರಲು ಸಿದ್ಧರಾಗಿದ್ದು, ಪಶ್ಚಿಮ ಬಂಗಾಳ ಜಿಲ್ಲೆಯ ಜಲಪಾಯಿಗುರಿ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಬಾಂಗ್ಲಾದ ಗಡಿಯಲ್ಲಿ ಬುಧವಾರ ಗುಂಪುಗೂಡಿದ್ದರು.
ಝಾಪೋರ್ತಾಲಾ ಗಡಿ ಉಪಠಾಣೆ ವ್ಯಾಪ್ತಿಯಲ್ಲಿ ದಕ್ಷಿಣ ಬೆರುಬರಿ ಗ್ರಾಮದ ಬಳಿ ಅವರು ಗುಂಪು ಸೇರಿದ್ದರು.
'ಹಲವಾರು ಬಾಂಗ್ಲಾದೇಶಿಯರು, ಅದರಲ್ಲೂ ಹಿಂದೂಗಳು ಭಾರತದ ಗಡಿಭಾಗದಲ್ಲಿ ಬಂದು ಸೇರಿದ್ದಾರೆ' ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನ ಡಿಐಜಿ ಅಮಿತ್ ಕುಮಾರ್ ತ್ಯಾಗಿ ಕೋಲ್ಕತ್ತದಲ್ಲಿ ತಿಳಿಸಿದರು.
'200ಕ್ಕೂ ಹೆಚ್ಚು ಜನರು ಪಶ್ಚಿಮ ಬಂಗಾಳದ ಬಾಂಗ್ಲಾದೇಶ ಗಡಿಯಲ್ಲಿ ನಿಂತಿದ್ದರು. ರಾಜ್ಯದ ಜಲ್‌ಪಾಯಿಗುರಿ ಜಿಲ್ಲೆಯಲ್ಲಿ 600ಕ್ಕೂ ಅಧಿಕ ಮಂದಿ ಜಮಾಯಿಸಿದ್ದಾರೆ. ಇಲ್ಲಿ ಯಾವುದೇ ಬೇಲಿ ಇರದ ಕಾರಣ, ಮಾನವ ಕವಚ ನಿರ್ಮಿಸಲಾಗಿದೆ. ಗುಂಪು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು' ಎಂದು ಅವರು ತಿಳಿಸಿದರು.
'ಇವರು ಬಾಂಗ್ಲಾದೇಶದ ಪಂಚಾಗ್ರಹ ಜಿಲ್ಲೆಯ ಐದು ಗ್ರಾಮಗಳಿಗೆ ಸೇರಿದವರು. ಗಡಿಯನ್ನು ಬಂದ್ ಮಾಡಿರುವ ಕಾರಣ ಇವರಲ್ಲಿ ಯಾರೊಬ್ಬರೂ ಪ್ರವೇಶಿಸಲು ಅವಕಾಶ ಆಗಲಿಲ್ಲ. ಬಳಿಕ ಅವರನ್ನು ಬಾಂಗ್ಲಾದೇಶ ಗಡಿಪಡೆ (ಬಿಜಿಬಿ) ಸಿಬ್ಬಂದಿ ಕರೆದೊಯ್ದರು' ಎಂದರು.
ಉದ್ಯೋಗದಲ್ಲಿ ಮೀಸಲು ಕೋಟಾ ವಿರೋಧಿಸಿ ವಿದ್ಯಾರ್ಥಿ ಸಮುದಾಯದ ಪ್ರತಿಭಟನೆಯಿಂದಾಗಿ ಬಾಂಗ್ಲಾದಲ್ಲಿ ಅರಾಜಕತೆ ನಿರ್ಮಾಣವಾಗಿತ್ತು. ಇದರ ಪರಿಣಾಮ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದೇಶದಿಂದಲೇ ಪಲಾಯನ ಮಾಡಿದ್ದರು.