ಕಾಸರಗೋಡು: ತೋಡು, ತೊರೆ ಸೇರಿದಂತೆ ತ್ಯಾಜ್ಯದಿಂದ ನೀರಿನ ಹರಿವಿಗೆ ತೊಡಕಾಗಿದ್ದ ಮಾಲಿನ್ಯ ಶುಚೀಕರಿಸಿ ನೀರಿನ ಸುಗಮ ಹರಿವಿಗೆ ಸಹಾಯಕವಾಗುವ ರೀತಿಯಲ್ಲಿ ಕೈಗೊಳ್ಳಲಾಗಿರುವ 'ಇನ್ನು ನಾನು ಹರಿಯಲೇ'ಅಭಿಯಾನದ ಮೂರನೇ ಹಂತದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಮಡಿಕೈ ಪೂತಕಲ್ ಬಯಲಿನಲ್ಲಿ ನಡೆಸಲಾಯಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಜಲ ಸಂರಕ್ಷಣೆಯನ್ನು ಒಳಪಡಿಸಲಾಗಿದ್ದು, ಹೊಳೆಗಳ ಪುನಶ್ಚೇತನ ಹಾಗೂ ಚಟುವಟಿಕೆಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ತೋಡಿನ ಅಂಚು ಕಳೆಮುಕ್ತಗೊಳಿಸುವ ಹಾಗೂ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಹುರಿಹಗ್ಗದ ಹಾಸಿನ ಅಳವಡಿಕೆಯನ್ನು ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಸಣ್ಣ ತೊರೆಗಳನ್ನು ಸಂರಕ್ಷಿಸುವ ಮಹತ್ತರ ಯೋಜನೆ ಜಲಸಂರಕ್ಷಣಾ ಕಾರ್ಯಗಳಿಗೆ ಮತ್ತಷ್ಟು ಬಲ ತಂದುಕೊಡಲಿದೆ. ಜಲಮೂಲಗಳ ಪುನರುಜ್ಜೀವನ ಕಾರ್ಯಕ್ರಮ ನಾಡಿಗೆ ಮಾದರಿಯಾಗಿದೆ. ಜಿಲ್ಲಾದ್ಯಂತ 700ಕ್ಕೂ ಹೆಚ್ಚು ಸಣ್ಣ ತೋಡುಗಳ ಶುಚೀಕರಣ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದರು.
ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಯೋಜನೆ ಬಗ್ಗೆ ವಿವರಿಸಿದರು. ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಮಪದ್ಮನಾಭನ್, ಪಿ ಸತ್ಯ, ಟಿ ರಾಜನ್, ಹಸಿರು ಕೇರಳ ಮಿಷನ್ ಬ್ಲಾಕ್‍ಸಂಯೋಜಕ ಕೆ.ಬಾಲಚಂದ್ರನ್ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ಎಂಜಿನಿಯರ್ ಅವಿನೇಶ್ ಉಪಸ್ಥಿತರಿದ್ದರು. ರತೀಶ್ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ.ಬಿಜು ವಂದಿಸಿದರು.
ಹಸಿರು ಕೇರಳ ಮಿಷನ್ ಮಾಲಿನ್ಯಮುಕ್ತ ನವಕೇರಳ ಜನಾಂದೋಲನದ ಅಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ನರೆಗಾ ಯೋಜನೆಯ ಮೂಲಕ ಜಿಲ್ಲೆಯಲ್ಲಿ ತ್ಯಾಜ್ಯದಿಂದ ಕೂಡಿದ ನೀರಿನ ಮೂಲ ಚ್ಛಗೊಳಿಸಲು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ.


