ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಉಳುವಾರಿನಿಂದ ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯತಮನೊಂದಿಗೆ ವಾಪಸಾಗಿದ್ದು, ಇವರ ವಿವಾಹಕ್ಕೆ ಹಿರಿಯರು ಸಮ್ಮತಿ ನೀಡದಿರುವುದರಿಂದ ಜೋಡಿ ಮತ್ತೆ ನಾಪತ್ತೆಯಾಗಿದೆ.
ಉಳುವಾರು ನಿವಾಸಿ ಮೊಯ್ದಿನ್ ಎಂಬವರ ಪುತ್ರಿ ನಸ್ರೀನಾ(10)ಡಿ. 13ರಂದು ರಾತ್ರಿ ನಾಪತ್ತೆಯಾಗಿದ್ದು, ಇದೇ ಸಂದರ್ಭ ಇಚ್ಲಂಪಾಡಿ ಕೊಡ್ಯಮ್ಮೆ ಉಜಾರು ಹೌಸ್‍ನ ಅಹಮ್ಮದ್ ನೌಫಾಲ್(30)ಎಂಬಾತನೂ ನಾಪತ್ತೆಯಾಗಿದ್ದನು. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ನಂತರ ಮನೆಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಜೋಡಿಯ ಹೆತ್ತವರು ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸುದಾಖಲಿಸಿ ತನಿಖೆ ನಡೆಸುವ ಮಧ್ಯೆ ನಸ್ರೀನಾ ಹಾಗೂ ಮಹಮ್ಮದ್ ನೌಫಾಲ್ ಊರಿಗೆ ಆಗಮಿಸಿದ್ದಾರೆ. ಇವರಿಬ್ಬರೂ ವಿವಾಹಿತರಾಗಲು ತೀರ್ಮಾನಿಸಿದ್ದು, ಈ ಬಗ್ಗೆ ಜಮಾಅತ್ ಸಮಿತಿಯನ್ನು ಸಂಪರ್ಕಿಸಿದ್ದರೆನ್ನಲಾಗಿದೆ. ಆದರೆ ಸಮಿತಿ ಸೂಕ್ತ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ಇಬ್ಬರೂ ಮತ್ತೆ ಪರಾರಿಯಾಗಿದ್ದಾರೆ. ಜೋಡಿ ಮತ್ತೆ ಪರಾರಿಯಾಗಿರುವುದರಿಂದ ಹೆತ್ತವರು ಆತಂಕಕ್ಕೀಡಾಗಿದ್ದು, ಇವರ ಪತ್ತೆಗೆ ಪೊಲೀಸರು ಮತ್ತೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

