ಜಲ್ನಾ: ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರು ಹಾಗೂ ರೋಹಿಂಗ್ಯಾಗಳಿಗೆ ನಕಲಿ ಜನನ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ಬಿಜೆಪಿ ಮುಖಂಡ ಕಿರೀಟ ಸೋಮಯ್ಯ ಮಂಗಳವಾರ ಆರೋಪಿಸಿದ್ದಾರೆ.
'ಇಂಥ ಅಕ್ರಮಗಳನ್ನು ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಭೇದಿಸಿದ್ದಾರೆ.
ಜನನ ಪ್ರಮಾಣಪತ್ರ, ರೇಷನ್ ಕಾರ್ಡ್, ಶಾಲಾ ಪ್ರಮಾಣಪತ್ರದಂತ ಪ್ರಮುಖ ದಾಖಲೆಗಳನ್ನು ಬಾಂಗ್ಲಾದೇಶಿಯರು ಹಾಗೂ ರೋಹಿಂಗ್ಯಾಗಳನ್ನು ಒಳಗೊಂಡು ಕಳೆದ ಆರು ತಿಂಗಳಿಂದ 2.14 ಲಕ್ಷದಷ್ಟು ವಿತರಿಸಲಾಗಿದೆ' ಎಂದು ಹೇಳಿದ್ದಾರೆ.
'ಒಟ್ಟಾರೆ, 1.13 ಲಕ್ಷ ಜನನ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಇದರಲ್ಲಿ ಅಕ್ರಮ ಎಸಗಲಾಗಿದೆ. ಜಲ್ನಾ ಜಿಲ್ಲೆಯೊಂದರಲ್ಲೇ 7,957 ನಕಲಿ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ' ಎಂದು ಸೋಮಯ್ಯ ದೂರಿದ್ದಾರೆ.




