ಮುಂಬೈ: ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಬಿಜೆಪಿ ಪಕ್ಷದ ನಾಯಕರ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸೂಕ್ಷ್ಮ ಹೇಳಿಕೆ ನೀಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಮುಖ್ಯಸ್ಥ ಚಂದ್ರಶೇಖರ ಬಾವಂಕುಲೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಕಾಂಗ್ರೆಸ್ ನಿರಂತರವಾಗಿ ಹಿಂದೂಗಳ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಅಗೌರವಿಸುತ್ತ ಬಂದಿದೆ. ಅಲ್ಲದೆ, ನಿರ್ದಿಷ್ಟ ಸಮುದಾಯವನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದ್ದಾರೆ.
ಕೋಟ್ಯಂತರ ಹಿಂದೂಗಳು ಭಕ್ತಿ ಮತ್ತು ಶ್ರದ್ಧೆಯಿಂದ ಭಾಗವಹಿಸುವ ಕುಂಭಮೇಳದಂತಹ ಪವಿತ್ರ ಕಾರ್ಯಕ್ರಮವನ್ನು ಅಪಹಾಸ್ಯ ಮಾಡುವ ಮೂಲಕ ಖರ್ಗೆ ಅವರು ಗಂಗಾ ನದಿಯ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಬಾವಂಕುಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಅವರ ಹೇಳಿಕೆಯು ಅಸಂಬದ್ಧ ಮಾತ್ರವಲ್ಲ, ತೀವ್ರ ಆಕ್ರೋಶವನ್ನುಂಟು ಮಾಡುತ್ತದೆ. ಹಿಂದೂಗಳು ಯಾವಾಗಲೂ ಸಹಿಷ್ಣುತೆಯ ಗುಣ ಉಳ್ಳವರಾಗಿದ್ದಾರೆ. ಆದರೆ, ಅವರ ನಂಬಿಕೆಯನ್ನು ಅಪಹಾಸ್ಯ ಮಾಡುವ ಹಕ್ಕನ್ನು ಖರ್ಗೆಗೆ ಕೊಟ್ಟವರು ಯಾರು?, ಕಾಂಗ್ರೆಸ್ ಹಿಂದೂಗಳ ಮತಗಳನ್ನು ಹುಡುಕುತ್ತದೆ. ಆದರೆ, ಹಿಂದೂಗಳ ಬಗ್ಗೆ ತಿರಸ್ಕಾರ ಭಾವನೆಯನ್ನು ಹೊಂದಿದೆ . ಹಿಂದೂಗಳು ಏನು ತಪ್ಪು ಮಾಡಿದ್ದಾರೆ?, ಆರು ದಶಕಗಳಿಗೂ ಹೆಚ್ಚು ಕಾಲ ಈ ದೇಶವನ್ನು ಆಳಲು ಕಾಂಗ್ರೆಸ್‌ಗೆ ಅವಕಾಶ ಮಾಡಿಕೊಟ್ಟದ್ದು ಅವರ ತಪ್ಪೇ?' ಎಂದು ಬಾವಂಕುಲೆ ಪ್ರಶ್ನಿಸಿದ್ದಾರೆ.
ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಗಂಗಾ ನದಿಯಲ್ಲಿ ಸ್ನಾನ ಮಾಡಿದ ಕುರಿತು ಹೇಳಿಕೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ, ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಬಡತನ ದೂರವಾಗಲಿದೆಯೇ ಎಂದು ಪ್ರಶ್ನಿಸಿದ್ದರು. ಬಿಜೆಪಿ ನಾಯಕರು ಕ್ಯಾಮೆರಾಗಳಿಗೆ ಪೋಸ್ ನೀಡುವ ಉದ್ದೇಶದಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.




