ನವದೆಹಲಿ: ಭಾರತದ ವಿಸ್ಕಿ 'ಇಂದ್ರಿ'ಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ ಎಂದು ಸ್ವಿಡ್ಜರ್ಲೆಂಡ್ ಸಚಿವರು ಹೇಳಿದ್ದರು. ಆ ಮಾತನ್ನು ಕೇಳಿ ಅಚ್ಚರಿಯಾಗಿತ್ತು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಗೋಯಲ್ ಅವರು, ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ್ದಾರೆ.
'ಜ್ಯೂರಿಚ್‌ನಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಸ್ವಿಸ್ ಸಚಿವರು, ವಿಶ್ವ ಪ್ರಸಿದ್ಧವಾದ ಭಾರತೀಯ ವಿಸ್ಕಿಯ ಬಗ್ಗೆ ನನಗೆ ಹೇಳಿದ್ದರು. ಅದು, ಯುರೋಪಿನ ಕಪಾಟುಗಳಲ್ಲಿ ಸಿಗುವುದು ಅಪರೂಪ ಎಂದದ್ದನ್ನು ಕೇಳಿ ಅಚ್ಚರಿಗೊಂಡಿದ್ದೆ. ನಾನು ವಿಸ್ಕಿ ಕುಡಿಯುವುದಿಲ್ಲ. ಆದರೆ, ಅವರ ಮಾತು ಕೇಳಿ ಆಶ್ಚರ್ಯವಾಗಿತ್ತು. ಆ ವಿಸ್ಕಿಯನ್ನು ಯುರೋಪ್ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ' ಎಂದು ಗೋಯಲ್ ಹೇಳಿದ್ದಾರೆ.
ಹರಿಯಾಣದ ಇಂದ್ರಿ ಎಂಬ ಸಣ್ಣ ಗ್ರಾಮದಲ್ಲಿ ತಯಾರಾಗುವ ಸಿಂಗಲ್ ಮಾಲ್ಟ್ ವಿಸ್ಕಿಯು, ಸ್ವಿಸ್ ಸಚಿವರಿಂದ ಭಾರಿ ಪ್ರಶಂಸೆ ಗಿಟ್ಟಿಸಿದೆ. ಜಗತ್ತಿನ ಇತರ ರಾಷ್ಟ್ರಗಳಲ್ಲಿ ತಯಾರಾಗುವ ವಿಸ್ಕಿಗಳಿಗಿಂತ ಇಂದ್ರಿ ರುಚಿಯಾಗಿರುತ್ತದೆ ಎಂದು ಅವರು ಬಣ್ಣಿಸಿದ್ದರು ಎಂದು ಗೋಯಲ್ ಸ್ಮರಿಸಿದ್ದಾರೆ.






