ನವದೆಹಲಿ: ಈ ವರ್ಷ ಭಾರತ 100 ಗಿಗಾ ವ್ಯಾಟ್ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದುವ ಮೂಲಕ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.ಈ ಕುರಿತು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಇಲಾಖೆಯ ನಿರಂತರ ಬದ್ಧತೆ ಹಾಗೂ ಪ್ರಧಾನಿ ಮೋದಿ ಅವರ ನಾಯಕತ್ವದಿಂದ ಇಂದು ಭಾರತ ಸೌರ ಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಗೆ ಬಂದಿದೆ. 2030 ಕ್ಕೆ ಈ ಸಾಮರ್ಥ್ಯವನ್ನು 500 ಗಿಗಾ ವ್ಯಾಟ್‌ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
100 ಗಿಗಾ ವ್ಯಾಟ್ ಸೌರ ಶಕ್ತಿ ಉತ್ಪಾದಾನಾ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು 2022ರಲ್ಲಿಯೇ ಪೂರ್ಣಗೊಳಿಸಬೇಕಿತ್ತು. ಆದರೆ, ಕೋವಿಡ್, ಲಾಕ್‌ಡೌನ್ ಕಾರಣದಿಂದ ಮುಂದಕ್ಕೆ ಹೋಯಿತು. ಅದಾಗ್ಯೂ ಜಾಗತಿಕವಾಗಿ ಸೌರ ಶಕ್ತಿಯಲ್ಲಿ ಭಾರತ ನಾಯಕನ ಸ್ಥಾನವನ್ನು ವಹಿಸಿಕೊಂಡಿದೆ ಎಂದು ಹೇಳಿದ್ದಾರೆ.
2014 ರಲ್ಲಿ ಭಾರತದ ಸೌರ ಶಕ್ತಿ ಉತ್ಪಾದಾನಾ ಸಾಮರ್ಥ್ಯ ಕೇವಲ 2 ಗಿಗಾ ವ್ಯಾಟ್ ಇತ್ತು ಎಂದಿದ್ದಾರೆ.
ಭಾರತದಲ್ಲಿ ಸೌರಶಕ್ತಿ ಬೇಡಿಕೆ ಶೇ 35ರಷ್ಟು ಹೆಚ್ಚಳವಾಗಿದ್ದು ಹೊಸ ಮತ್ತು ನವೀಕರಿಸಬಹುದಾದ ಇಂಧನದ ಬಳಕೆಗೆ ನಮ್ಮ ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಆ ಮೂಲಕ ಪಾರಂಪರಿಕ ಇಂಧನಗಳ ಬಳಕೆಯನ್ನು ಗಣನೀಯವಾಗಿ ತಗ್ಗಿಸಲಾಗುತ್ತದೆ ಎಂದು ಹೇಳಿದ್ದಾರೆ.






