ನೀವು ಸ್ಮಾರ್ಟ್‌ಫೋನ್ ಬಳಸುತ್ತಿದ್ದೀರಾ? ಹೌದು, ಎಂದಾದರೆ ಖಂಡಿತ ಜಾಗರೂಕರಾಗಿರಿ. ಕಾರಣ, ನೀವು ಬಳಸುತ್ತಿರುವ ಫೋನ್ ಆಯಂಡ್ರಾಯ್ಡ್ ಆಗಿರಲಿ ಅಥವಾ ಐಫೋನ್ ಆಗಿರಲಿ, ತಕ್ಷಣವೇ ಈ ಹೊಸ ವೈರಸ್ನಿಂದ ಎಚ್ಚೆತ್ತುಕೊಳ್ಳಿ. ಪ್ರಸ್ತುತ, ಸ್ಪಾರ್ಕ್‌ಕ್ಯಾಟ್ ಎಂಬ ಹೊಸ ಮಾಲ್‌ವೇರ್ ವೈರಸ್, ಮೊಬೈಲ್ನಲ್ಲಿರುವ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ, ಖಾಸಗಿ ಡೇಟಾವನ್ನು ಕ್ಷಣಮಾತ್ರದಲ್ಲಿ ಕದ್ದು, ಸೋರಿಕೆ ಮಾಡುತ್ತದೆ.
ಈ ಅತ್ಯಂತ ಅಪಾಯಕಾರಿ ಮಾಲ್‌ವೇರ್ ಸ್ಮಾರ್ಟ್ಫೋನ್ಗಳಲ್ಲಿ ವೇಗ ಅಲ್ಲ ಶರವೇಗದಲ್ಲಿ ಹಬ್ಬುತ್ತಿದೆ. ಈಗಾಗಲೇ ಈ ಮಾಲ್‌ವೇರ್ ಜಾಗತಿಕವಾಗಿ ಸಾವಿರಕ್ಕೂ ಅಧಿಕ ಸಂಖ್ಯೆಯ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತೊಂದರೆ ಕೊಟ್ಟಿದೆ. ಸಾಮಾನ್ಯ ಮೊಬೈಲ್ ವೈರಸ್‌ಗಳಿಗಿಂತ ಭಿನ್ನವಾಗಿರುವ ಸ್ಪಾರ್ಕ್‌ಕ್ಯಾಟ್ ವೈರಸ್, ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಸೇರಿದಂತೆ ಸೂಕ್ಷ್ಮ ಹಾಗೂ ಖಾಸಗಿ ಡೇಟಾವನ್ನು ಬಹಳ ಸುಲಭವಾಗಿ ಲೀಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಏನಿದು ಸ್ಪಾರ್ಕ್‌ಕ್ಯಾಟ್ ಮಾಲ್‌ವೇರ್?
ಇತ್ತೀಚಿನ ವರದಿಯ ಪ್ರಕಾರ, ಸ್ಪಾರ್ಕ್‌ಕ್ಯಾಟ್ ಅಪಾಯಕಾರಿ ಸಾಫ್ಟ್‌ವೇರ್ ಅಭಿವೃದ್ಧಿ ಕಿಟ್ (SDK) ಆಗಿದ್ದು, ಇದು ಗೂಗಲ್ ಪ್ಲೇ ಸ್ಟೋರ್ ಮತ್ತು ಆಯಪಲ್ ಸ್ಟೋರ್‌ನಲ್ಲಿ ಬಹು ಅಪ್ಲಿಕೇಶನ್‌ಗಳಲ್ಲಿ ಕಂಡುಬರುತ್ತದೆ. ಈ ಮಾಲ್‌ವೇರ್ ಬಳಕೆದಾರರ ಸಾಧನಗಳಲ್ಲಿ ಸಂಗ್ರಹವಾಗಿರುವ ಫೋಟೋಸ್ಗಳನ್ನು ಸ್ಕ್ಯಾನ್ ಮಾಡುವ ಮೂಲಕ ವೈಯಕ್ತಿಕ ಡೇಟಾವನ್ನು ಕಸಿಯುತ್ತದೆ. ಅರಿವಿಲ್ಲದೆ ಈ ವೈರಸ್ಗೆ ಸಂಬಂಧಿಸಿದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದೇ ಆದರೆ ನಿಮ್ಮ ಹಣಕಾಸು ಮತ್ತು ವೈಯಕ್ತಿಕ ಮಾಹಿತಿ ಸೋರಿಕೆ ಆಗುವ ಎಲ್ಲಾ ಸಾಧ್ಯತೆಗಳಿವೆ.
ಸ್ಪಾರ್ಕ್‌ಕ್ಯಾಟ್ ವೈರಸ್ ಪೀಡಿತ ಅಪ್ಲಿಕೇಶನ್‌ಗಳು
ಇಲ್ಲಿಯವರೆಗೆ, 18 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಮತ್ತು 10 ಐಒಎಸ್ (iOS) ಅಪ್ಲಿಕೇಶನ್‌ಗಳು ಈ ಮಾಲ್‌ವೇರ್ ಅನ್ನು ಹೊಂದಿರುವುದು ದೃಢಪಟ್ಟಿದೆ. ಬಾಧಿತ ಅಪ್ಲಿಕೇಶನ್‌ಗಳಲ್ಲಿ ಒಂದು (ChatAi). ನೀವು ಈ ಅಪ್ಲಿಕೇಶನ್ ಅಥವಾ ಯಾವುದೇ ಇತರ ಅನುಮಾನಾಸ್ಪದ ಅಪ್ಲಿಕೇಶನ್ನ ಡೌನ್‌ಲೋಡ್ ಮಾಡಿಕೊಂಡಿದ್ದರೆ, ಈ ಕೂಡಲೇ ಅದನ್ನು ನಿಮ್ಮ ಫೋನ್‌ನಿಂದ ಡಿಲೀಟ್ ಮಾಡಿಬಿಡಿ.
ನಿಮ್ಮ ಡೇಟಾ ಸೋರಿಕೆ ಹೇಗೆ?
ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ಬಳಕೆ: ಇದು Google ML ಕಿಟ್ (OCR) ಬಳಸಿ ಫೋಟೋಗಳಿಂದ ಹಲವು ವಿಷಯಗಳನ್ನು ರೀಡ್ ಮಾಡಲಿದೆ. ಇದು ಸೂಕ್ಷ್ಮ ಮಾಹಿತಿಯನ್ನು ಕಸಿಯುತ್ತದೆ.
ಬಹು ಭಾಷೆಗಳನ್ನು ಗುರುತಿಸುತ್ತದೆ: ಈ ಮಾಲ್‌ವೇರ್ ಇಂಗ್ಲಿಷ್, ಹಿಂದಿ, ಚೈನೀಸ್, ಜಪಾನೀಸ್, ಫ್ರೆಂಚ್, ಇಟಾಲಿಯನ್, ಇತ್ಯಾದಿ ಕೀವರ್ಡ್‌ಗಳನ್ನು ಸುಲಭವಾಗಿ ಗುರುತಿಸುವ ಸಾಮರ್ಥ್ಯ ಹೊಂದಿದೆ. ಇದು ತುಂಬಾ ಅಪಾಯಕಾರಿ ಎಂಬುದು ಇಲ್ಲಿ ಗಮನಾರ್ಹ.
ವೈರಸ್ನಿಂದ ಫೋನ್ ಸುರಕ್ಷಿತ ಹೇಗೆ?
ಅಪರಿಚಿತ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಬೇಡಿ. ಉತ್ತಮ ವಿಮರ್ಶೆ ಹಾಗೂ ವಿಶ್ವಾಸಾರ್ಹ ಮೂಲಗಳಿಂದ ಬಂದಿರುವ ಅಪ್ಲಿಕೇಶನ್‌ಗಳನ್ನು ಮಾತ್ರ ಇಳಿಸಿಕೊಳ್ಳಿ.
ಅಪ್ಲಿಕೇಶನ್ ಅನುಮತಿಗಳನ್ನು ಪರಿಶೀಲಿಸಿ: ಯಾವುದೇ ಅಪ್ಲಿಕೇಶನ್ ನಿಮ್ಮ ಖಾಸಗಿ ಮಾಹಿತಿ ಅಥವಾ ಕ್ಯಾಮೆರಾಗೆ ಅನಗತ್ಯ ಪ್ರವೇಶ ಅನುಮತಿ ಕೋರಿದರೆ, ಅದನ್ನು ತಕ್ಷಣವೇ ನಿರ್ಬಂಧಿಸಿ.
ಸಾಫ್ಟ್‌ವೇರ್ ನವೀಕರಿಸಿ: ನಿಯಮಿತ ನವೀಕರಣಗಳೊಂದಿಗೆ ಭದ್ರತಾ ದೋಷಗಳನ್ನು ಸರಿಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಆಯಂಟಿ ವೈರಸ್ ಬಳಸಿ: ಭದ್ರತಾ ಅಪ್ಲಿಕೇಶನ್‌ಗಳು ಮಾಲ್‌ವೇರ್ ಬೆದರಿಕೆಗಳನ್ನು ಪತ್ತೆಹಚ್ಚಬಹುದು ಮತ್ತು ಅವುಗಳನ್ನು ತಕ್ಷಣವೇ ನಿರ್ಬಂಧಿಸಬಹುದು. ಹೀಗಾಗಿ ಆಯಂಟಿ ವೈರಸ್ ಬಳಕೆ ಒಳ್ಳೆಯದು.




