ಕಾಸರಗೋಡು: ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಹಂದಿಗಿರಿಸಿದ್ದ ಕುಣಿಕೆಗೆ ಸಿಲುಕಿ ಪಾರಾಗಿಬಂದಿದ್ದ ಚಿರತೆಯೊಂದನ್ನು ಅರಿವಳಿಕೆ ಸಿರಿಂಜ್ ಅಳವಡಿಸಿದ ಬಂದೂಕಿನಿಂದ ಗುಂಡಿಟ್ಟು ಸೆರೆಹಿಡಿಯುವ ಪ್ರಯತ್ನ ವಿಫಲವಾಗಿದೆ. ಅರಣ್ಯಾಧಿಕಾರಿಗಳು ಹಾಗೂ ಪಶು ಸಂರಕ್ಷಣಾ ಇಲಾಖೆ ಅದಿಕಾರಿಗಳ ಕಾರ್ಯಾಚರಣೆ ವೆಲೆ ಕೂದಲೆಳೆಯ ಂತರದಿಂದ ಪಾರಾಗಿರುವ ಚಿರತೆಗಾಗಿ ವ್ಯಾಪಕ ಹುಡುಕಾಟ ನಡೆಸಲಾಗುತ್ತಿದೆ. ಶರೀರದಲ್ಲಿ ಹಂದಿಗಿರಿಸಿದ್ದ ಕುಣಿಕೆ ಇರುವುದರಿಂದ ಚಿರತೆಗೆ ಹೆಚ್ಚು ದೂರ ಸಂಚರಿಸಲಾಗದ ಸ್ಥಿತಿಯಲ್ಲಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೊಳತ್ತೂರಿನ ಖಾಸಗಿ ವ್ಯಕ್ತಿಯೊಬ್ಬರ ಹಿತ್ತಿಲ ಗುಹೆಯಾಕಾರದ ಸುರಂಗದಲ್ಲಿ ಕಾಡುಹಂದಿಗಿರಿಸಿದ್ದ ಕುಣಿಕೆಗೆ ಚಿರತೆ ಬಿದ್ದಿದ್ದು, ಸ್ಥಳೀಯ ನಿವಾಸಿ ಮಹಿಳೆ ಬುಧವಾರ ರಾತ್ರಿ ಶೆಟ್ಟಿನ ಮೋಟಾರು ಸ್ವಿಚ್ ತೆಗೆಯಲು ತೆರಳಿದ್ದಾಗ ಶಬ್ದ ಕೇಳಿ ನೋಡುತ್ತಿದ್ದಂತೆ ಕುಣಿಕೆ ಹೊಂದಿದ್ದ ಚಿರತೆ ಕಂಡುಬಂದಿದ್ದು, ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಸುರಂಗದೊಳಗೆ ಸಿಲುಕಿಕೊಂಡಿದ್ದ ಸಂದರ್ಭ ಸ್ಥಳೀಯರು ಕಲ್ಲುಗಳನ್ನಿರಿಸಿ ಮುಚ್ಚಿದ್ದರು. ತಕ್ಷಣ ಅರಣ್ಯಾಧಿಕಾರಿಗಳು, ಪಶುವೈದ್ಯರ ತಂಡ ಸ್ಥಳಕ್ಕಾಗಮಿಸಿ ಬಂಡೆ ಸಂದಿಯಲ್ಲಿದ್ದ ಚಿರತೆ ಹೊರಬರಲು ಕಾಯುತ್ತಿರುವ ಮಧ್ಯೆ, ಗರುವಾರ ನಸುಕಿಗೆ ಕಲ್ಲು ಸರಿಸಿ ಕಾಯುತ್ತಿದ್ದಂತೆ ಹೊರಬಂದ ಚಿರತೆಗೆ ಅರಿವಳಿಕೆ ಗುಂಡು ಹಾರಿಸಿದ್ದರೂ, ಅಲ್ಪದರಲ್ಲಿ ಗುರಿತಪ್ಪಿ ಚಿರತೆ ಪಾರಾಗಿತ್ತು.
ಈ ಪ್ರದೇಶದಲ್ಲಿ ಚಿರತೆ ಸಂಚಾರದ ಬಗ್ಗೆ ವ್ಯಾಪಕ ಭೀತಿ ಎದುರಾಗಿದ್ದು, ಅರಣ್ಯಾಧಿಕಾರಿಗಳು ಬೋನು ಇರಿಸಿ ಚಿರತೆ ಸೆರೆಹಿಡಿಯಲು ಕಾಯುತ್ತಿದ್ದಂತೆ ಚಿರತೆ ಕುಣಿಕೆಗೆ ಸಿಲುಕಿ ಪಾರಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪರಾಗಿರುವ ಚಿರತೆ ಪತ್ತೆಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ಮುಂದುವರಿಸಿದ್ದಾರೆ. ಅರಣ್ಯಾಧಿಕಾರಿ ಕೆ. ಅಶ್ರಫ್ ಹಾಗೂ ಇತರ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.




