ಕಾಸರಗೋಡು: ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಲಿರುವ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮ ಭಕ್ತಾದಿಗಳ ಒಗ್ಗಟ್ಟು ಹಾಗೂ ಏಕತೆಗೆ ಸಾಕ್ಷಿಯಾಗಿ ಯಶಸ್ಸು ಕಾಣುವಂತಾಗಲಿ ಎಂಬುದಾಗಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾ. 27ರಿಂದ ಏ. 7ರ ವರೆಗೆ ನಡೆಯಲಿರುವ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಮಧೂರು ಕ್ಷೇತ್ರದ ಪುನ:ನಿರ್ಮಾಣ, ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಇಲ್ಲಿನ ಭಕ್ತಾದಿಗಳ ದೀರ್ಘ ಕಾಲದ ಕನಸಾಗಿದೆ. ಇಲ್ಲಿನ ಪೌರಾಣಿಕ ಹಿನ್ನೆಲೆ, ಸಾನ್ನಿಧ್ಯ ಮಹಿಮೆ ಲೋಕೋತ್ತರ ಪ್ರಕೀರ್ತಿಗೆ ಕಾರಣವಾಗಿದ್ದು, ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಪ್ರತಿಯೊಬ್ಬ ಭಕ್ತಾದಿಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ದೇರೆಬೈಲು ಡಾ. ಗುರುರಾಜ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ದೇಸ್ಥಾನದ ಪವಿತ್ರ ಪಾಣಿ ರತನ್‍ಕುಮಾರ್ ಕಾಮಡ, ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ದಿವ್ಯ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ. ರಆಜೇಶ್, ಮಾಧ್ಯಮ ಸಮಿತಿ ಅಧ್ಯಕ್ಷ ರಾಜೀವನ್ ನಂಬ್ಯಾರ್, ಆರ್ಥಿಕ ಸಮಿತಿ ಅಧ್ಯಕ್ಷ ಕೆ. ಸುರೇಶ್ ಉಪಸ್ಥಿತರಿದ್ದರು. ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಮಧೂರು ಸ್ವಾಗತಿಸಿದರು. ನಾರಾಯಣಯ್ಯ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಗಿರೀಶ್ ಸಂಧ್ಯಾ ವಂದಿಸಿದರು.
ಕಾರ್ಯಕ್ರಮಕ್ಕೆ ಮೊದಲು ಶ್ರೀದೇವರ ನಡೆಯಲ್ಲಿ ಶ್ರೀಮೋಹನದಾಸ ಸ್ವಾಮೀಜಿ, ಡಾ. ಬಿ.ಎಸ್ ರಾವ್ ಹಾಗೂ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಬ್ರಹ್ಮಶ್ರೀ ದೇರೆಬೈಲು ಡಾ. ಗುರುರಾಜ ತಂತ್ರಿ ಆಮಂತ್ರಣಪತ್ರಕ್ಕೆ ಅಕ್ಷತೆ ಹಾಕಿ ಪ್ರಾರ್ಥಿಸಿದರು.



